ಬೆಳಗಾವಿ: ಮುಂಗಾರು ಮಳೆ ಕೈಕೊಟ್ಟಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಇದರಿಂದ ಬೆಳಗಾವಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ರ‍್ಯಾಲಿ ನಡೆಸಿದ ರೈತ ಮುಖಂಡರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕೆಲಕಾಲ ಧರಣಿ ಕುಳಿತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಮುಂಗಾರು ಮಳೆಯ ಅಭಾವ ಹಾಗೂ ಬರಗಾಲದಿಂದ ರೈತರ ಬದುಕು ತತ್ತರಿಸಿ ಹೋಗಿದೆ. ಬರ ಪರಿಹಾರದ ಮೊತ್ತ ಒಂದು ಎಕರೆಗೆ 50 ಸಾವಿರ ರೂ. ಯಂತೆ ಪರಿಹಾರ ಧನ ಕೊಡಬೇಕು. ಜಿಲ್ಲೆಯಲ್ಲಿರುವ ಪ್ರತಿಯೊಂದು ಗ್ರಾಮಕ್ಕೆ ಕುಡಿಯಲು ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ನೀರಿನ ವ್ಯವಸ್ಥೆ ತಕ್ಷಣ ಕಲ್ಪಿಸಬೇಕು. ರೈತರ ಸಾಲ ವಸೂಲಾತಿ ಸಂಪೂರ್ಣ ನಿಲ್ಲಿಸಬೇಕು. ಸಾಲ ಮನ್ನಾ ಮಾಡಬೇಕು. ಕಬ್ಬು ಬೆಳೆಗಾರರಿಗೆ ಬಾಕಿ ಬಿಲ್ ತಕ್ಷಣ ಮುಟ್ಟಿಸಬೇಕು. ಸಕ್ಕರೆ ಮಂಡಳ ನಿಗಮದಲ್ಲಿ ಸಿಬ್ಬಂದಿ ಕೊರತೆಯಿದ್ದು, ತಕ್ಷಣವೇ ನೇಮಕಾತಿ ಮಾಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈಟಿವಿ ಭಾರತ ಜೊತೆಗೆ ಮಾತನಾಡಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ, ರಾಜ್ಯ ಸರ್ಕಾರ ತಕ್ಷಣವೇ ರಾಜ್ಯವನ್ನು ಬರಗಾಲ ಎಂದು ಘೋಷಿಸಿ, 1 ಎಕರೆಗೆ ಕನಿಷ್ಠ 50 ಸಾವಿರ ರೂ. ಬರ ಪರಿಹಾರ ನೀಡಬೇಕು. ಜನ, ಜಾನುವಾರುಗಳಿಗೆ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಅಲ್ಲದೇ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಮಳೆ ಆಗದೇ ಬೆಳೆ ಬಾರದೇ ಇದ್ದಿದ್ದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಸಾಲ ವಸೂಲಾತಿ ಸಂಪೂರ್ಣವಾಗಿ ನಿಲ್ಲಿಸಲು ಜಿಲ್ಲಾಧಿಕಾರಿಗಳು ಕೂಡಲೇ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ರಾಮದುರ್ಗ ತಾಲೂಕು ರೈತ ಸಂಘದ ಅಧ್ಯಕ್ಷ ಜಗದೀಶ ದೇವರಡ್ಡಿ ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತರ ಸಂಕಷ್ಟ ಆಲಿಸುವಷ್ಟು ಜ್ಞಾನ ಇಲ್ಲದೇ ಇರುವ ಸರ್ಕಾರ. ರೈತರ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆ ಮತ್ತು ಐಪಿ ಸೆಟ್ಗಳಿಗೆ ಅಧಾರ್ ಕಾರ್ಡ್ ಲಿಂಕ್ ಮಾಡುವ ಹುಚ್ಚುತನಕ್ಕೆ ಸರ್ಕಾರ ಕೈ ಹಾಕಿದೆ. ಇದನ್ನು ಕೈ ಬಿಡಬೇಕು. ಬರಗಾಲ ಬಂದು ಬಿತ್ತಿದ ಬೆಳೆಗಳೆಲ್ಲಾ ಒಣಗಿ ಹೋಗಿವೆ. ಸರ್ಕಾರ ರೈತರ ನೆರವಿಗೆ ಬರಬೇಕು ಎಂದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರೈತ ಸಂಘದ ಮುಖಂಡರಾದ ಸುರೇಶ ಪರಗಣ್ಣವರ, ಬಸವರಾಜ ಬಿಚ್ಚುರು, ರಮೇಶ ವಾಲಿ, ರಾಘವೇಂದ್ರ ನಾಯಕ, ಮುಸ್ತಾಕ್ ಸಯ್ಯದ್, ಪ್ರಕಾಶ ನಾಯಿಕ್, ಶಿವಾನಂದ ದೊಡವಾಡ, ಸುರೇಶ ಸಂಪಗಾವಿ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ: ಅಕ್ಕಿ ವಿತರಣೆಗೆ ಒಂದೆರಡು ತಿಂಗಳು ತಡವಾದರೆ ಸಮಸ್ಯೆ ಏನೂ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ