ಅಥಣಿ: ಕೃಷ್ಣಾ ನದಿ ಪ್ರವಾಹಕ್ಕೆ ಒಳಗಾದ ತಾಲೂಕಿನ 15 ಗ್ರಾಮಗಳ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಬಂದ ರೈತರನ್ನು ಮಾರ್ಗ ಮಧ್ಯೆಯೇ ಪೊಲೀಸರು ತಡೆದರು.
ಜೂನ್ 18ರಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಬೇಕು. ಅನುಮತಿ ನೀಡುವಂತೆ ಈ ಮೊದಲೇ ಅಥಣಿ ಠಾಣೆ ಪೊಲೀಸರು ಮತ್ತು ಜಿಲ್ಲಾಧಿಕಾರಿಗಳನ್ನು ಕೇಳಿಕೊಂಡಿದ್ದರೂ ಅವಕಾಶ ನೀಡಿರಲಿಲ್ಲ. ಇಂದು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲು ಹೋಗುತ್ತಿದ್ದೇವೆ. ಆದರೆ, ನಮ್ಮನ್ನು ಹಲ್ಯಾಳ ಗ್ರಾಮದಲ್ಲಿ ಪೊಲೀಸರು ತಡೆದಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ತಾಲೂಕು ಅಧ್ಯಕ್ಷ ಮಹಾದೇವ ಮಡಿವಾಳ, ಕೃಷ್ಣಾ ನದಿ ಪರಿಹಾರ ಇನ್ನೂ ಸರಿಯಾಗಿ ಬಿಡುಗಡೆಯಾಗಿಲ್ಲ. ರಾಜಕಾರಣಿಗಳಂತೆ ಅಧಿಕಾರಿಗಳು ಆಶ್ವಾಸನೆ ನೀಡುತ್ತಿದ್ದಾರೆ. ಮತ್ತೆ ಪ್ರವಾಹ ಬರುವ ಭೀತಿಯಲ್ಲೇ ಇದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಗ್ರಾಮಗಳನ್ನು ಬಿಟ್ಟು ಹೋದರೆ ನಮಗೆ ನಿರ್ದಿಷ್ಟ ಸ್ಥಳವಿಲ್ಲ. ನಾವು ಎಲ್ಲಿ ಹೋಗುವುದು ಎಂದು ಜಿಲ್ಲಾಧಿಕಾರಿ ಕೇಳಬೇಕು. ಆದರೆ, ಅದಕ್ಕೆ ಪೊಲೀಸರು ನಮ್ಮನ್ನು ಬಿಡುತ್ತಿಲ್ಲ. ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.