ಬೆಳಗಾವಿ : ಕಿತ್ತೂರು ತಾಲೂಕಿನ ಎಂ ಕೆ ಹುಬ್ಬಳ್ಳಿ ಗ್ರಾಮದಲ್ಲಿರುವ ಮಲಪ್ರಭಾ ಸಕ್ಕರೆ ಕಾರ್ಖಾನೆಯಲ್ಲಿ ಬಾಕಿ ಉಳಿದಿರುವ ಕಬ್ಬಿನ ಹಣವನ್ನು ತಕ್ಷಣ ಬಿಡುಗಡೆ ಮಾಡುವಂತೆ ಸಿಎಂ ಬಿ ಎಸ್ ಯಡಿಯೂರಪ್ಪನವರಿಗೆ ಮನವಿ ಮಾಡಿಕೊಳ್ಳಲಾಗಿದೆ.
ರೈತರ ₹25 ಕೋಟಿಗೂ ಅಧಿಕ ಬಾಕಿಯನ್ನ ತಕ್ಷಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಕೋರಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಚನ್ನಪ್ಪ ಪೂಜೇರಿ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ನೆರೆ ಪರಿಹಾರ ಹಾಗೂ ಮೂರು ವರ್ಷಗಳಿಂದ ಹುಬ್ಬಳ್ಳಿ ಸಕ್ಕರೆ ಕಾರ್ಖಾನೆ ಬಾಕಿ ಉಳಿಸಿಕೊಂಡಿರುವ ರೈತರ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಲಾಗಿದೆ.
ಇದಲ್ಲದೇ ರೈತರು ಈಗಾಗಲೇ ಅಪೆಕ್ಸ್ ಬ್ಯಾಂಕ್ ಸಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈವರೆಗೂ ಬ್ಯಾಂಕ್ನವರು ಲೋನ್ ನೀಡುತ್ತಿಲ್ಲ. ಹೀಗಾಗಿ, ಅಂತಹ ರೈತರಿಗೆ ತಕ್ಷಣ ಲೋನ್ಗೆ ಅನುಮತಿ ನೀಡಬೇಕೆಂದು ಒತ್ತಾಯ ಮಾಡಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಬೇಗ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕು. ಮುಂದಾಗುವ ಹೋರಾಟಕ್ಕೆ ದಾರಿ ಮಾಡಿಕೊಡದೇ ರೈತರ ಬಾಕಿ ಬಿಲ್ ಬಿಡುಗಡೆ ಸೇರಿ ನೆರೆ ಪರಿಹಾರ ಬಿಡಗಡೆ ಮಾಡಬೇಕು ಎಂದು ಆಗ್ರಹಿಸಿದರು.