ಬೆಳಗಾವಿ: 2020ನೇ ಸಾಲಿನ ಬಜೆಟ್ ಮಂಡನೆಯಲ್ಲಿ ಮಹಾದಾಯಿ ಯೋಜನೆ ಜಾರಿ ಹಾಗೂ ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಡಿಸಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಲಾಯಿತು.
ಸರ್ಕಾರದ ಮುಂದಿನ ಬಜೆಟ್‌ನಲ್ಲಿ ರೈತರಿಗೆ, ನೆರೆ ಸಂತ್ರಸ್ತರಿಗೆ ಹಾಗೂ ಮಹದಾಯಿ ಯೋಜನೆಗೆ ಮೊದಲ ಆದ್ಯತೆ ನೀಡಬೇಕು. ಅಲ್ಲದೇ ಚುನಾವಣೆ ವೇಳೆ ಈಗಿನ ಸರ್ಕಾರ 1ಲಕ್ಷದವರೆಗೆ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ, ಇದುವರೆಗೂ ಸಾಲ ಮನ್ನಾ ಮಾಡಿಲ್ಲ. ಈ ಕೂಡಲೇ ಸಾಲ ಮನ್ನಾ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಹಿಂದಿನ ಸರ್ಕಾರ ರಾಷ್ಟ್ರೀಕೃತ , ಸಹಕಾರಿ ಬ್ಯಾಂಕುಗಳಲ್ಲಿ 2 ಲಕ್ಷದವರಗೆ ಸಾಲ ಮನ್ನಾ ಯೋಜನೆಯ ಆದೇಶವನ್ನು 2009 -2017 ಡಿ.31ರವರೆಗೆ ಮಾತ್ರ ಅನುಷ್ಠಾನ ಮಾಡಿದೆ. ಅದನ್ನು ಸಾಲ ಪಡೆದ ಎಲ್ಲ ರೈತರಿಗೂ ತಾರತಮ್ಯವಾಗದಂತೆ ಮನ್ನಾ ಮಾಡಬೇಕು. ರಾಷ್ಟ್ರೀಕೃತ ಬ್ಯಾಂಕಿನ ಅಧಿಕಾರಿಗಳು ರೈತರಿಗೆ ನೋಟಿಸ್ ನೀಡುವ ಮೂಲಕ ಕಿರುಕುಳ ನೀಡುತ್ತಿದ್ದಾರೆ. ಇದನ್ನು ತಕ್ಷಣ ನಿಲ್ಲಿಸಬೇಕು. 2019 - 2020ನೇ ಸಾಲಿನ ಕಬ್ಬಿನ ಹಣವನ್ನು ಕಾರ್ಖಾನೆ ಮಾಲೀಕರು ಕೇಂದ್ರ ಸರ್ಕಾರದ ನಿಗದಿಯಂತೆ ರೈತರಿಗೆ ತಕ್ಷಣ ಬಿಡುಗಡೆ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೇ ಹಣ ಬಿಡುಗಡೆ ಮಾಡದಿರುವ ಕಾರ್ಖಾನೆ ಮಾಲೀಕರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.
ಇನ್ನು ಈಗಿನ ಸರ್ಕಾರ ನೀಡಿದ ಭರವಸೆಯಂತೆ ರಾಜ್ಯದ ರೈತರಿಗೆ 1 ಲಕ್ಷದವರೆಗೆ ಸಾಲ ಮನ್ನಾ ಮಾಡುವ ಮೂಲಕ ಮುಂದಿನ ಬಜೆಟ್‌ನಲ್ಲಿ ಎಲ್ಲ ರೈತರಿಗೂ ಅನುಕೂಲವಾಗುವಂತೆ ಅನುದಾನ ಬಿಡುಗಡೆ ಮಾಡಬೇಕು. ಜಿಲ್ಲೆಯಲ್ಲಿ ಕೆಲ ತಾಲೂಕುಗಳಲ್ಲಿ ನೆರೆ ಸಂತ್ರಸ್ತರ ಸರ್ವೇ ಕಾರ್ಯ ಸಮರ್ಪಕವಾಗಿಲ್ಲ. ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ಸರ್ವೇ ಕಾರ್ಯ ಮರುಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳಿಗೆ ಪರಿಹಾರ ಒದಗಿಸಬೇಕು. ಮಹದಾಯಿ ಮತ್ತು ಕಳಸಾ ಬಂಡೂರಿ ಯೋಜನೆಯ ಕಾಮಗಾರಿ ಆರಂಭಿಸಿ ಈ ಭಾಗದ ರೈತರ ಹಿತ ಕಾಪಾಡಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.