ಅಥಣಿ (ಬೆಳಗಾವಿ): ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಬೆಳಗಾವಿಯ ಅಥಣಿ ತಾಲೂಕಿನಲ್ಲಿ ಕುಟುಂಬವೊಂದು ಲಾಕ್ಡೌನ್ ಹಿನ್ನೆಲೆ ನೇಣಿಗೆ ಶರಣಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿತ್ತು. ಇದರಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾನವ ಹಕ್ಕು ಸಂಘಟನೆಯ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ ಚಿಂಚಲಿ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಅವರಿಗೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ದೀಪಕ್ ಶಿಂಧೆ, ಲಾಕ್ಡೌನ್ ಬಗ್ಗೆ ಸಾರ್ವಜನಿಕರಲ್ಲಿ ವಿರೋಧ ಹುಟ್ಟುಹಾಕಲು ಮತ್ತು ಘನ ಸರ್ಕಾರದ ವೈಫಲ್ಯ ಎಂದು ಬಿಂಬಿಸಲು ಉದ್ದೇಶಪೂರ್ವಕವಾಗಿ ಸುದ್ದಿ ಹಬ್ಬಿಸಲಾಗಿದೆ. ಆದ್ದರಿಂದ ಅಥಣಿ ತಾಲೂಕು ಆಡಳಿತ, ಬೆಳಗಾವಿ ಜಿಲ್ಲಾಡಳಿತ ಇಂತಹ ಸುದ್ದಿ ಹಬ್ಬಿಸುವವರನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.