ಅಥಣಿ (ಬೆಳಗಾವಿ) : ಮುಖ್ಯಮಂತ್ರಿ ಅವರು ದೆಹಲಿ ಪ್ರವಾಸ ಕೈಗೊಂಡಿರುವುದು ನಮ್ಮ ರಾಜ್ಯದ ಅಭಿವೃದ್ಧಿಗೆ ಹಾಗೂ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ತರುವುದಕ್ಕೆ ಎಂದು ಈಟಿವಿ ಭಾರತಕ್ಕೆ ಡಿಸಿಎಂ ಲಕ್ಷ್ಮಣ ಪ್ರತಿಕ್ರಿಯೆ ನೀಡಿದರು.
ರಾಜ್ಯಕ್ಕೆ ಬರಬೇಕಿರುವ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲು ಹಣಕಾಸು ಸಚಿವೆ ನಿರ್ಮಲ ಸೀತಾರಾಮ್ ಅವರನ್ನು ಭೇಟಿ ಮಾಡಲಿದ್ದಾರೆ. ಹಾಗೆಯೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಅಷ್ಟೇ ಅಲ್ಲ, ರಾಜ್ಯದ ಅಭಿವೃದ್ಧಿ ದೃಷ್ಟಿ ಹಿನ್ನೆಲೆ ಹಲವಾರು ಸಚಿವರನ್ನು ಭೇಟಿ ಮಾಡಲಿದ್ದಾರೆ. ಇದು ಒಂದು ಸಹಜ ಭೇಟಿ, ಇದಕ್ಕೆ ವಿಶೇಷ ಅರ್ಥ ಬೇಡ ಎಂದರು.
ರಾಷ್ಟ್ರೀಯ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಮಂತ್ರಿಮಂಡಲ ವಿಸ್ತರಣೆ ಹಾಗೂ ಪುನರ್ವಿಂಗಡೆ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ವರಿಷ್ಠರ ಒಪ್ಪಿಗೆ ಪಡೆದು ರಾಜ್ಯದ ಸಂಪುಟ ವಿಸ್ತರಣೆ ನಡಿಯಲಿದೆ. ವರಿಷ್ಠರು ಹಾಗೂ ಮುಖ್ಯಮಂತ್ರಿ ಅವರು ಯಾವುದೇ ತೀರ್ಮಾನ ಮಾಡಿದ್ರೂ ಕೂಡ ನಾವು ಸಹಮತ ನೀಡುತ್ತೇವೆ ಎಂದರು.
ಉತ್ತರ ಕರ್ನಾಟಕದ ಭಾಗದಿಂದ ಮುಖ್ಯಮಂತ್ರಿ ನೇಮಕಾತಿ ವಿಚಾರವಾಗಿ ಮಾತನಾಡಿ, ಸದ್ಯದಲ್ಲೇ ಮುಖ್ಯಮಂತ್ರಿ ನೇಮಕ ಎಂಬುದು ಊಹಾಪೋಹ. ಅವಧಿ ಮುಗಿಯುವವರೆಗೆ ಯಡಿಯೂರಪ್ಪನವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಸ್ಪಷ್ಟಪಡಿಸಿದರು.