ಬೆಳಗಾವಿ: ಬೆಂಗಳೂರಿನಲ್ಲಿ ಡ್ರಗ್ ಪತ್ತೆ ಪ್ರಕರಣ ಸ್ಯಾಂಪಲ್ ಅಷ್ಟೇ. ಇದರ ಜಾಲ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳಿಗೆ ಹೆಚ್ಚೆಚ್ಚು ದಾಳಿ ಮಾಡಲು ಸೂಚನೆ ನೀಡಲಾಗಿದೆ ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಿರೋದ್ರಿಂದ ನಿಖರವಾಗಿ ಮಾಹಿತಿ ಸಿಗೋದಿಲ್ಲ. ಅನುಮಾನ ಬಂದ ಕೂಡಲೇ ಪತ್ತೆ ಹಚ್ಚಿ ತಡೆಗಟ್ಟುವ ಕೆಲಸವನ್ನು ಮಾಡಬೇಕು.ಇಲ್ಲಾಂದ್ರೆ ಮಾದಕವಸ್ತುಗಳಿಗೆ ಅಮಾಯಕ ಯುವಕರು ಬಲಿಯಾಗುವ ಆತಂಕ ವ್ಯಕ್ತಪಡಿಸಿದರು.
ಸರ್ಕಾರ ಮತ್ತು ಇಲಾಖೆಯ ಹೆಸರು ಹಾಳಾಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಐಜಿಯೊಂದಿಗೆ ಮಾತನಾಡಿ ಪೊಲೀಸ್ ಮತ್ತು ಅಬಕಾರಿ ಇಲಾಖೆ ಜಂಟಿ ಕಾರ್ಯಾಚರಣೆ ಮೂಲಕ ನಿಯಂತ್ರಿಸಲು ಸೂಚನೆ ನೀಡಿದ್ದೇನೆ ಎಂದರು.
ಮಾದಕವಸ್ತುವಿನ ಬೆಲೆ ಹೆಚ್ಚಾಗಿರೋದ್ರಿಂದ ಬಡತನ ಹಿನ್ನೆಲೆ ಇರುವ ವ್ಯಕ್ತಿಗಳು ಹೆಚ್ಚಾಗಿ ಅದರ ಬಲೆಗೆ ಬೀಳುವುದಿಲ್ಲ. ಶ್ರೀಮಂತರು, ಸ್ಥಿತಿವಂತರು ಮಾತ್ರ ಇದರ ಬಲೆಯಲ್ಲಿ ಸಿಲುಕುತ್ತಾರೆ. ಇನ್ನು ಶಾಲಾ-ಕಾಲೇಜುಗಳ ಸುತ್ತಲಿನ ಪ್ರದೇಶಗಳಲ್ಲಿ ಮಾದಕ ವಸ್ತುಗಳ ವ್ಯವಹಾರ ನಡೆಯುತ್ತಿದೆ ಎಂದು ಮಾಹಿತಿ ಸಿಕ್ಕಿದೆ. ಹೀಗಾಗಿ ಶಾಲಾ ಆರಂಭದ ದಿನಗಳಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚೆಕ್ ಮಾಡಲು ತಿಳಿಸಲಾಗುತ್ತದೆ ಎಂದರು.
ಇದಲ್ಲದೇ ಮುಂದಿನ ತಿಂಗಳಿಂದ ಬಾರ್, ಪಬ್ ಓಪನ್ ಮಾಡುವ ಸಾಧ್ಯತೆ ಇದೆ. ಬಾರ್ ಓಪನ್ ಮಾಡುವುದರ ಬಗ್ಗೆ ಸರ್ಕಾರದ ಮಟ್ಟದಲ್ಲಿ ಈಗಾಗಲೇ ಚರ್ಚೆ ನಡೆದಿದೆ ಎಂದರು. ಇಂದು ಬೆಳಗಾವಿಯಲ್ಲಿ ವಿಭಾಗದ ಮಟ್ಟದಲ್ಲಿ ನಡೆಯುವ ಪ್ರಗತಿ ಪರಿಶೀಲನೆ ಸಭೆಯಲ್ಲಿ ಎಲ್ಲ ವಿಷಯಗಳ ಹಾಗೂ ಅದರ ತಡೆಗೆ ಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಲಾಗುವುದು ಎಂದರು.