ಬೆಳಗಾವಿ: ಪ್ರತಿಯೊಂದು ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಸೈನಿಕ ಭವನ ನಿರ್ಮಾಣ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾಜಿ ಸೈನಿಕರು ಬೆಳಗಾವಿಯ ಸುವರ್ಣ ಗಾರ್ಡನ್ ಬಳಿಯ ಟೆಂಟ್ನಲ್ಲಿ ಇಂದು ಪ್ರತಿಭಟನೆ ನಡೆಸಿದರು. ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಮಾಜಿ ಸೈನಿಕರಿಗೆ ಶೇ.10ರಷ್ಟು ಮೀಸಲಾತಿ ಇದ್ದರೂ ಅದು ಸರಿಯಾಗಿ ಜಾರಿಗೆ ಬಂದಿಲ್ಲ. ಹಾಗಾಗಿ, ಅದು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬರಬೇಕು. ಹೆದ್ದಾರಿ ಟೋಲ್ಗಳಲ್ಲಿ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು. ಕರ್ನಾಟಕ ಸರ್ಕಾರದಲ್ಲಿ ಮಾಜಿ ಸೈನಿಕರ ಕೋಟಾದಡಿ ಕೆಲಸ ಮಾಡುತ್ತಿರುವ ಸರ್ಕಾರಿ ನೌಕರರಿಗೆ ಹೈದರಾಬಾದ್ ಕರ್ನಾಟಕ ಮುಂಬಡ್ತಿ ರೀತಿಯಲ್ಲಿ ಮಾಜಿ ಸೈನಿಕರಿಗೂ ಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ವೇಳೆ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಬಸಪ್ಪ ತಳವಾರ ಮಾತನಾಡಿ, "ವಿವಿಧ ನಿಗಮ ಮಂಡಳಿಗಳಲ್ಲಿ ಮಾಜಿ ಸೈನಿಕ ಕೋಟಾದಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ ವಿಚಾರದಲ್ಲಿಯೂ ಅನ್ಯಾಯವಾಗಿದೆ. ಸರ್ಕಾರ ಈ ಬಗ್ಗೆಯೂ ಕ್ರಮ ಕೈಗೊಳ್ಳಬೇಕು. ಹುತಾತ್ಮ ಯೋಧರ ಕುಟುಂಬಕ್ಕೆ ಕನಿಷ್ಠ 5 ಲಕ್ಷ ರೂ. ಪರಿಹಾರ ನೀಡಬೇಕು. ಅಲ್ಲದೇ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ರೀತಿಯಂತೆ ಯೋಧರ ಕ್ಷೇತ್ರ ಮಾಡಿ ಚುನಾವಣೆ ಮೂಲಕ ವಿಧಾನ ಪರಿಷತ್ಗೆ ಆಯ್ಕೆ ಮಾಡಬೇಕು" ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ವಿರೂಪಾಕ್ಷ ತಿಳಗಂಜಿ, ಅಡಕೆಪ್ಪಾ ಮನಗುತ್ತಿ, ಶಂಕರ ಸಿಂಧೆ, ಎನ್ ಕಳಸಣ್ಣವರ, ಸಂಭಾಜಿ ಮಾಳೋದಕರ್ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.
ಹಡಪದ ಸಮಾಜದಿಂದ ಪ್ರತಿಭಟನೆ: ಮತ್ತೊಂದೆಡೆ, ಕರ್ನಾಟಕ ಹಡಪದ ಅಭಿವೃದ್ಧಿ ನಿಗಮ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ, ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ ನೇತೃತ್ವದಲ್ಲಿ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದಿಂದ ಇಂದು ಬೆಳಗಾವಿಯ ಸುವರ್ಣ ಗಾರ್ಡನ್ ಬಳಿಯ ಟೆಂಟ್ನಲ್ಲಿ ಪ್ರತಿಭಟನೆ ನಡೆಯಿತು.
ಹಿಂದಿನ ಸರ್ಕಾರ ಅಭಿವೃದ್ಧಿ ನಿಗಮ ಘೋಷಿಸಿದ್ದು, ನಿಗಮಕ್ಕೆ ಕೂಡಲೇ 50 ಕೋಟಿ ಅನುದಾನ ನೀಡಬೇಕು. ಇದಕ್ಕೆ ನಮ್ಮವರನ್ನೆ ಅಧ್ಯಕ್ಷರನ್ನಾಗಿ ನೇಮಿಸಬೇಕು. ಅಲ್ಲದೇ ನಿಗಮದಲ್ಲಿ ಹಡಪದ ಸಮಾಜದ ಉಪನಾಮಗಳನ್ನು ಸೇರಿಸಬೇಕು. 2002ರ ಕರ್ನಾಟಕ ಸರ್ಕಾರಿ ಆದೇಶದಲ್ಲಿ ಪ್ರವರ್ಗ-2ಎ ಅಡಿ ಬರುವ 8ಎ ದಲ್ಲಿ ತೆಗೆದು ಹಾಕಿರುವ ಕ್ಷೌರಿಕರಿಗೆ ಕರೆಯುವ ಮೂಲನಾಮ ನಾಯಿಂದವನ್ನು ಪುನಃ ಸೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಇದನ್ನೂ ಓದಿ: ಅರೆಕಾಲಿಕ ಉಪನ್ಯಾಸಕರ ಧರಣಿ: ಸೇವೆ ಕಾಯಂ, ಸೇವಾ ಭದ್ರತೆಗೆ ಒತ್ತಾಯ