ಚಿಕ್ಕೋಡಿ: ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ ಇದರ ಅಧ್ಯಕ್ಷರನ್ನಾಗಿ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಪರಿಶಿಷ್ಟ ಜಾತಿ ಜನರ ಆರ್ಥಿಕ ಅಭಿವೃದ್ಧಿಗಾಗಿ ಸ್ಥಾಪನೆಯಾದ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿ ವಿವಿಧ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತಂದು ಪರಿಶಿಷ್ಟ ಜಾತಿ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಸಿಎಂ ಯಡಿಯೂರಪ್ಪನವರನ್ನು ಒಂದು ಕಡೆ ಮಿತ್ರಮಂಡಳಿಯ ಶಾಸಕರು ಸಚಿವ ಸ್ಥಾನಕ್ಕಾಗಿ ಒತ್ತಾಯಿಸುತ್ತಿದ್ದರೆ, ಇತ್ತ ಮೂಲ ಬಿಜೆಪಿ ಶಾಸಕರೂ ಸಹ ಸಚಿವ ಸ್ಥಾನ ಹಾಗೂ ನಿಗಮ ಮಂಡಳಿಯ ಸ್ಥಾನಗಳಿಗೆ ಬೇಡಿಕೆ ಇಡುತ್ತಿದ್ದಾರೆ.
ಸಚಿವಾಕಾಂಕ್ಷಿಗಳ ಒತ್ತಡ ನಿವಾರಣೆಗೆ ನಿಗಮ ಮಂಡಳಿಯಲ್ಲಿ ಕಾಯಕಲ್ಪ; ಫಲ ಕೊಡುತ್ತಾ ಸಿಎಂ ಕಾರ್ಯತಂತ್ರ?!
ಅಲ್ಲದೇ, ಮೂಲ ಬಿಜೆಪಿ ಶಾಸಕರು ತಮಗೆ ಕೊಟ್ಟ ನಿಗಮ ಮಂಡಳಿಯ ಸ್ಥಾನವನ್ನು ಸಹ ಸ್ವೀಕಾರ ಮಾಡದೆ ಲಾಭದಾಯಕ ನಿಗಮ ಮಂಡಳಿ ಸ್ಥಾನಕ್ಕಾಗಿ ಸಿಎಂ ಬಳಿ ಪಟ್ಟು ಹಿಡಿದಿದ್ದಾರೆ. ಈ ಪೈಕಿ ರಾಯಬಾಗ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಕೂಡ ಒಬ್ಬರಾಗಿದ್ದರು.
ಖಾದಿ ಗ್ರಾಮೋದ್ಯೋಗ ನಿಗಮದ ಸ್ಥಾನ ಬೇಡವೆಂದು ಸಿಎಂಗೆ ತಿಳಿಸಿದ್ದೇನೆ : ಶಾಸಕ ದುರ್ಯೋಧನ ಐಹೊಳೆ
ಸರ್ಕಾರ ಐಹೊಳೆಗೆ ಖಾದಿ ಗ್ರಾಮೋದ್ಯೋಗ ನಿಗಮ ಮಂಡಳಿ ಸ್ಥಾನವನ್ನು ನೀಡಿತ್ತು. ಆದರೆ, ಅದಕ್ಕೆ ಒಪ್ಪದೆ ಬೇರೆ ನಿಗಮ ಮಂಡಳಿ ಸ್ಥಾನಕ್ಕೆ ಸಿಎಂ ಬಳಿ ಬೇಡಿಕೆ ಇಟ್ಟಿದ್ದರು. ಕರ್ನಾಟಕ ಭೂ ಸೇನಾ ನಿಗಮ ಮಂಡಳಿ ಅಥವಾ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೇಲೆ ಐಹೊಳೆ ಕಣ್ಣು ಹಾಕಿದ್ದರು. ಈಗಾಗಲೇ ನೀಡಿರುವ ಖಾದಿ ನಿಗಮದಲ್ಲಿ ಯಾವುದೇ ಹಣ ಬರುವುದಿಲ್ಲ, ಅದರಿಂದ ಅಭಿವೃದ್ಧಿ ಸಾಧ್ಯವಿಲ್ಲ. ಹಾಗಾಗಿ ಅನುದಾನ ಬರುವ ನಿಗಮ ಮಂಡಳಿಯೇ ಬೇಕು ಎಂದು ಬೇಡಿಕೆ ಇಟ್ಟಿದ್ದರು. ಅದರಂತೆ ಸದ್ಯ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.