ಬೆಳಗಾವಿ: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ಎಂಟು ಅಡಿ ಉದ್ದದ ಹಾವನ್ನು ಹಿಡಿದಿರುವ ಘಟನೆ ಜಿಲ್ಲೆಯ ಫಾಲಬಾವಿ ಗ್ರಾಮದಲ್ಲಿ ನಡೆದಿದೆ. ಈ ವೇಳೆ ಹಾವು ನಾಲ್ಕು ಬಾರಿ ಕಚ್ಚಿದರೂ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಪಾಲಭಾವಿ ಸೊನ್ನದ್ ತೋಟದ ಅಂಗನವಾಡಿಯಲ್ಲಿ ಕಾಣಿಸಿಕೊಂಡ ಹಾವನ್ನು ಮದ್ಯದ ಅಮಲಿನಲ್ಲಿದ್ದ ರಮೇಶ್ ಬಾಗಡೆ ಎಂಬುವರು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಯಾವುದೇ ಮುಂಜಾಗ್ರತ ಕ್ರಮ ಅನುಸರಿಸದೇ ಇರುವುದರಿಂದ ರಮೇಶ್ ಅವರಗೆ ಮುಖ, ಕೆನ್ನೆ. ತುಟಿ ಹಾಗೂ ಕಾಲಿಗೆ ನಾಲ್ಕು ಬಾರಿ ಹಾವು ಕಚ್ಚಿದೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ.
ಈ ಬಗ್ಗೆ ಮಾತನಾಡಿದ ರಮೇಶ್ "ಕಳೆದ 20 ವರ್ಷಗಳಿಂದ ಹಾವುಗಳನ್ನು ಹಿಡಿಯುತ್ತಿದ್ದೇನೆ. ಹಾವು ಕಚ್ಚಿದಾಗ ಬೆಳ್ಳುಳಿ ಹಾಗೂ ಒಂದು ಲೀಟರ್ ನೀರನ್ನು ಸೇವಿಸುತ್ತೇನೆ. ಇದರಿಂದ ನನಗೆ ಹಾವು ಕಚ್ಚಿದರೂ ಏನು ಆಗುವುದಿಲ್ಲ" ಎಂದು ತಿಳಿಸಿದ್ದಾರೆ.
ಆದರೆ ಈತನ ಹುಚ್ಚು ಧೈರ್ಯಕ್ಕೆ ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದರೆ, ಕೆಲವರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಯಾವುದೇ ರೀತಿಯ ಮುಂಜಾಗ್ರತಾ ಇಲ್ಲದೇ ಹಾವಿನೊಂದಿಗೆ ಚೆಲ್ಲಾಟ ಆಡೋದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.