ಬೆಳಗಾವಿ: ಮಕ್ಕಳಿಗೆ ಲಸಿಕೆ ವಿತರಣೆ ವೇಳೆ ಮಾರ್ಗಸೂಚಿ ಉಲ್ಲಂಘನೆ ಆಗಿರುವುದು ದೃಢಪಟ್ಟಿರುವ ಹಿನ್ನೆಲೆ ರಾಮದುರ್ಗ ತಾಲೂಕಿನ ಆರೋಗ್ಯ ಇಲಾಖೆಯ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ರಾಮದುರ್ಗ ತಾಲೂಕಿನ ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರುಬೆಲ್ಲಾ ಚುಚ್ಚುಮದ್ದು ಪಡೆದ ಬೋಚಬಾಳ ಗ್ರಾಮದ ಪವಿತ್ರಾ ಹುಲಗೂರ್ (13 ತಿಂಗಳು), ಮಧು ಉಮೇಶ್ ಕುರಗುಂದಿ (14 ತಿಂಗಳು) ಹಾಗು ರಾಮದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದ ಚೇತನ (15 ತಿಂಗಳು) ತೀವ್ರ ಅಸ್ವಸ್ಥಗೊಂಡು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು.
ಲಸಿಕೆ ವಿತರಣೆಯ ಮಾರ್ಗಸೂಚಿ ಉಲ್ಲಂಘಿಸಿರುವ ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಸಲ್ಮಾ ಮಹಾತ್, ಫಾರ್ಮಾಸಿಸ್ಟ್ ಜಯರಾಜ್ ಕುಂಬಾರ್ ಅವರನ್ನು ಅಮಾನತುಗೊಳಿಸಿ ಡಿಹೆಚ್ಒ ಡಾ. ಶಶಿಕಾಂತ ಮುನ್ಯಾಳ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ಮಕ್ಕಳಿಗೆ ಲಸಿಕೆ ವಿತರಣೆ ಆದ ಲೋಪಗಳ ಬಗ್ಗೆ ವರದಿ ನೀಡುವಂತೆ ಜಿಲ್ಲಾ ಲಸಿಕಾಕರಣ ಅನುಷ್ಠಾನ ಅಧಿಕಾರಿಗೆ ನಿರ್ದೇಶನ ನೀಡಿದ್ದೆ. ಆರೋಗ್ಯ ಕೇಂದ್ರದ ಇಬ್ಬರು ಸಿಬ್ಬಂದಿಯ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಆ ವರದಿ ಆಧರಿಸಿ ಇಬ್ಬರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಮಕ್ಕಳಿಗೆ ಚುಚ್ಚುಮದ್ದು ನೀಡುವ ಮುನ್ನವೇ ಲಸಿಕೆಯ ಚೈನ್ ಬ್ರೇಕ್ ಆಗಿತ್ತು. ಹೀಗಾಗಿ ಲಸಿಕೆ ಪಡೆದ ಮೂವರು ಕಂದಮ್ಮಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲು ಮುಖ್ಯ ಕಾರಣವಾಗಿದೆ. ಈ ಹಿನ್ನೆಲೆ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಈ ಮಾಹಿತಿಯನ್ನು ರಾಜ್ಯಮಟ್ಟದ ಹಿರಿಯ ಅಧಿಕಾರಿಗಳಿಗೂ ರವಾನೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ರಕ್ತ ಮಾದರಿಯ ವರದಿಗೆ ಕಾಯುತ್ತಿದ್ದೇವೆ. ವರದಿ ಬಂದ ನಂತರ ಇನ್ನೂ ಗಂಭೀರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಓದಿ: ಆತ್ಮ ನಿರ್ಭರ ಭಾರತ ಯೋಜನೆ.. ರಾಜ್ಯ ಸರ್ಕಾರದಿಂದ ಶೇ.15 ರಷ್ಟು ಹೆಚ್ಚುವರಿ ಸಹಾಯಧನ