ಬೆಳಗಾವಿ: ಭಾಷೆ ಮತ್ತು ನಟನೆಯ ಮೂಲಕ ಜನಮಾನಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ನಟ ಸಾರ್ವಭೌಮ ಡಾ. ರಾಜಕುಮಾರ್ ಅವರು ಕನ್ನಡ ನಾಡು-ನುಡಿಯ ರಕ್ಷಣೆಗೆ ಸದಾ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು ಎಂದು ಸಾಹಿತಿ ಶಿರೀಷ್ ಜೋಶಿ ಅಭಿಪ್ರಾಯಪಟ್ಟರು.
ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ವಾರ್ತಾ ಭವನದಲ್ಲಿ ಏರ್ಪಡಿಸಲಾಗಿದ್ದ ಡಾ.ರಾಜಕುಮಾ ಅವರ 92ನೇ ಜನ್ಮದಿನಾಚರಣೆ ವೇಳೆ ಮಾತನಾಡಿದ ಅವರು, ಡಾ.ರಾಜಕುಮಾರ ಭಾಗವಹಿಸುವಿಕೆಯಿಂದಲೇ ಗೋಕಾಕ್ ಚಳವಳಿ ತೀವ್ರ ಸ್ವರೂಪ ಪಡೆದುಕೊಂಡಿತ್ತು. ರಂಗಭೂಮಿ ಹಿನ್ನೆಲೆಯಿಂದ ಬಂದ ಡಾ.ರಾಜಕುಮಾರ್, ಅತ್ಯುತ್ತಮ ಅಭಿನಯ, ಹಿನ್ನೆಲೆ ಗಾಯನ, ಸ್ಪಷ್ಟ ಕನ್ನಡ ಮಾತುಗಳು ಮತ್ತು ಕನ್ನಡಪರ ಕಾಳಜಿಯಿಂದ ನಟಸಾರ್ವಭೌಮರಾಗಿ ಕರ್ನಾಟಕ ರತ್ನವಾಗಿ ಹೊರಹೊಮ್ಮಿದರು ಎಂದರು.
ಇದೇ ವೇಳೆ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಗುರುನಾಥ ಕಡಬೂರ, ಸದಭಿರುಚಿಯ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಬಹುದೊಡ್ಡ ಕೊಡುಗೆ ನೀಡಿರುವ ಡಾ.ರಾಜಕುಮಾರ್ ಅವರ ಸಾಧನೆ ಸ್ಮರಿಸಲು ಪ್ರತಿ ವರ್ಷ ಸರ್ಕಾರದ ವತಿಯಿಂದ ಏ.24 ರಂದು ಡಾ.ರಾಜಕುಮಾರ್ ಜಯಂತಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕೋವಿಡ್-19 ಹಿನ್ನೆಲೆ ಸರ್ಕಾರದ ನಿರ್ದೇಶನದಂತೆ ಡಾ.ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಅತ್ಯಂತ ಸರಳ ರೀತಿಯಲ್ಲಿ ಜಯಂತಿಯನ್ನು ಆಚರಿಸಲಾಯಿತು. ಅನಂತ ಪಪ್ಪು, ಎಂ.ಎಲ್. ಜಮಾದಾರ ಸೇರಿದಂತೆ ವಾರ್ತಾ ಇಲಾಖೆಯ ಎಲ್ಲ ಸಿಬ್ಬಂದಿ ಉಪಸ್ಥಿತರಿದ್ದರು.