ಬೆಳಗಾವಿ: ಕೋವಿಡ್-19 ನಿಯಂತ್ರಣ ಹಾಗೂ ಸೋಂಕಿತರಿಂದ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ರೂಪಿಸಲಾಗಿರುವ 'ಆರೋಗ್ಯ ಸೇತು ಆ್ಯಪ್ ಅನ್ನು ಎಲ್ಲರೂ ಡೌನಲೋಡ್ ಮಾಡಿಕೊಳ್ಳಬೇಕು ಎಂದು ರೈಲ್ವೆ ಇಲಾಖೆಯ ಸಹಾಯಕ ಸಚಿವ ಸುರೇಶ್ ಅಂಗಡಿ ಹೇಳಿದರು.
ಬೈಲಹೊಂಗಲ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದು ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೋಂಕಿತ ವ್ಯಕ್ತಿಗಳಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಅನುಕೂಲವಾಗುವಂತೆ ಪ್ರಧಾನಮಂತ್ರಿಗಳು 'ಆರೋಗ್ಯ ಸೇತು' ಆ್ಯಪ್ ಅಭಿವೃದ್ಧಿಪಡಿಸಲು ಕ್ರಮ ಕೈಗೊಂಡಿದ್ದಾರೆ. ಆದ್ದರಿಂದ ಸರಕಾರಿ ನೌಕರರು ಸೇರಿದಂತೆ ಎಲ್ಲ ಸಾರ್ವಜನಿಕರು ಈ ಆ್ಯಪ್ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಇದುವರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡ ಸಚಿವ ಸುರೇಶ್ ಅಂಗಡಿ, ಸರ್ಕಾರದ ನಿರ್ದೇಶನದಂತೆ ಲಾಕ್ ಡೌನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸೂಚನೆ ನೀಡಿದರು.
ಶಾಸಕರಾದ ಮಹಾಂತೇಶ ಕೌಜಲಗಿ, ಮಹಾಂತೇಶ ದೊಡ್ಡಗೌಡ್ರ, ಮಾಜಿ ಶಾಸಕ ವಿ.ಐ.ಪಾಟೀಲ ,ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ಡಿವೈಎಸ್ಪಿ ರತ್ನಾಕರ ಶೆಟ್ಟಿ, ತಹಶಿಲ್ದಾರ ಹೂಗಾರ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮುಲ್ಲಾ ಮತ್ತಿತರರು ಉಪಸ್ಥಿತರಿದ್ದರು.