ಬೆಳಗಾವಿ: ನಾನು ಸಮಗ್ರ ಕರ್ನಾಟಕ ಪ್ರವಾಸದಲ್ಲಿದ್ದು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಬೆಳಗಾವಿ ರಾಜಕಾರಣಕ್ಕೆ ಆಗಮನ ಎಂದು ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ರಾಜ್ಯದಲ್ಲಿ ನನ್ನ ಇನ್ವಾಲ್ಮೆಂಟ್ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ರಮೇಶ್ ಜಾರಕಿಹೊಳಿ ಅವರು ಡಿಕೆಶಿ ಮೇಲೆ ಪದೇ ಪದೇ ವಾಗ್ದಾಳಿ ನಡೆಸುತ್ತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ, ಅದೊಂದು ಮೆಂಟಲ್ ಕೇಸ್. ಆ ಬಗ್ಗೆ ನನಗೆ ಕೇಳುವುದಕ್ಕೆ ಹೋಗಬೇಡಿ. ಇಡೀ ರಾಜ್ಯದಲ್ಲಿ ಬದಲಾವಣೆ ತರಬೇಕು, ಪರಿಶುದ್ಧ ರಾಜಕಾರಣ ಮಾಡಬೇಕು, ನಾವು ಯಾವುದೇ ಮೆಂಟಲ್ ಕೇಸ್ಗಳಿಗೆ ಉತ್ತರ ಕೊಡಲು ಆಗುವುದಿಲ್ಲ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಾದ್ಯಂತ ಪ್ರತಿಭಟನೆ: ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್ ವತಿಯಿಂದ ಮಾರ್ಚ್ 9 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9 ಗಂಟೆಯಿಂದ 11 ಗಂಟೆ ವರೆಗೂ ಬಂದ್ ಮಾಡಿ, ಪ್ರತಿಭಟನೆ ಮಾಡುವುದಾಗಿ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಭ್ರಷ್ಟಾಚಾರ ವಿರೋಧಿಸಿ ಮಾ. 9 ರಂದು ಕರ್ನಾಟಕ ಬಂದ್: ಡಿಕೆಶಿ
ಬಿಜೆಪಿ ಸರ್ಕಾರ ಕಿತ್ತು ಹಾಕಬೇಕು: ರಾಜ್ಯದ ಪ್ರತಿಯೊಬ್ಬರು ಮಾರ್ಚ್ 9 ರಂದು 2 ಗಂಟೆ ಕಾಲ ಬಂದ್ ಮಾಡಲು ಸಹಕರಿಸಬೇಕು. ಎಲ್ಲರೂ ಭ್ರಷ್ಟಾಚಾರ ವಿರೋಧಿಸಿ ಪ್ರತಿಭಟನೆ ಮಾಡಬೇಕು. ನಮ್ಮ ಕಾರ್ಯಕರ್ತರು ಸಹ ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು. ಯಾರಿಗೂ ಒತ್ತಡ ಹಾಕಬಾರದು. ರಾಜ್ಯದಲ್ಲಿ ಸ್ವಚ್ಛ ಮತ್ತು ಪರಿಶುದ್ಧ ಆಡಳಿತವನ್ನು ತರಲು ಸಹಕಾರ ನೀಡುವಂತೆ ಮನವಿ ಮಾಡುತ್ತೇನೆ. ಕಾಂಗ್ರೆಸ್ ಕೊಟ್ಟ ಭರವಸೆಗಳನ್ನು ಈಡೇರಿಸಲು ಸದಾ ಸಿದ್ಧವಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಲೋಕಾಯುಕ್ತಕ್ಕೆ ಅಭಿನಂದನೆ: ಕರ್ನಾಟಕ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ನಾವು ಯಾರೂ ತಲೆ ಎತ್ತಿಕೊಂಡು ಓಡಾಡುವಂತಿಲ್ಲ, ಎಲ್ಲಾ ರಾಜಕಾರಣಿಗಳಿಗೂ ಇದು ಒಂದು ಪಾಠ. ನಾನು ಲೋಕಾಯುಕ್ತವನ್ನು ಅಭಿನಂದಿಸುವೆ. ಇಡೀ ದೇಶದಲ್ಲೇ ಬೆಂಗಳೂರು, ಕರ್ನಾಟಕದ ಆಡಳಿತಕ್ಕೆ ಎಷ್ಟು ಗೌರವವಿತ್ತು. ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್, ಸಿದ್ದರಾಮಯ್ಯ, ಕೃಷ್ಣಾ ಅವರು ನಾವು ನೆನಸಿಕೊಳ್ಳುವಂತೆ ಆಡಳಿತ ಕೊಟ್ಟಿದ್ದಾರೆ. ಆದ್ರೆ, ಇಂದಿನ ದಿನಗಳಲ್ಲಿ ರಾಜ್ಯದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ. ಸಣ್ಣ ಇಲಾಖೆ ಅಧಿಕಾರಿಗಳು, ತಾಲೂಕು, ಪಂಚಾಯತಿ ಹಾಗೂ ರಾಜ್ಯ ಮಟ್ಟದ ಐಎಎಸ್, ಐಪಿಎಸ್ ಅಧಿಕಾರಿಗಳು ಸಹ ಎಲ್ಲ ತೀರ್ಮಾನಗಳನ್ನು ಒತ್ತಡ ಹೇರಿ ಮಾಡಿಸುತ್ತಿದ್ದಾರೆ. ನಾಳೆ ನಾವು ಜೈಲಿಗೆ ಹೋಗಬೇಕಾಗುತ್ತದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರವಾಗಿ ಮಾತನಾಡಿ, ಯಾರಿಗೆ ಟಿಕೆಟ್ ಕೊಡಬೇಕು ಅನ್ನೋದನ್ನ 7ನೇ ತಾರೀಖಿನಂದು ಸ್ಕ್ರೀನಿಂಗ್ ಕಮಿಟಿ ಸಭೆ ಮಾಡಿ, ಚರ್ಚೆ ಮಾಡ್ತೇವೆ. ಆದಷ್ಟು ಬೇಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಯಾರ ಕಿವಿಯಲ್ಲಿ ಏನು ಹೇಳಬೇಕು ಅದನ್ನು ಹೇಳುತ್ತೇವೆ ಎಂದು ಹೇಳಿದರು.