ಬೆಳಗಾವಿ: ಬಿಮ್ಸ್ ಆಸ್ಪತ್ರೆಯ ಡಯಾಲಿಸಿಸ್ ಚಿಕಿತ್ಸಾ ವಿಭಾಗವನ್ನು ಸರಿಪಡಿಸಿ, ತುರ್ತು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ನಗರದ ಬಿಮ್ಸ್ ಎದುರಿಗೆ ಡಯಾಲಿಸಿಸ್ ರೋಗಿಗಳ ಕುಟುಂಬಸ್ಥರು ಪ್ರತಿಭಟನೆ ನಡೆಸಿ, ಬೀಮ್ಸ್ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಹೆಸರಿನಲ್ಲಿ ಡಯಾಲಿಸಿಸ್ ರೋಗಿಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಕೂಡಲೇ ಬಿಮ್ಸ್ನಲ್ಲಿ ಆಗುತ್ತಿರೋ ಅವ್ಯವಸ್ಥೆ ಸರಿಪಡಿಸಬೇಕು. ಕೋವಿಡ್ ಚಿಕಿತ್ಸೆಗೆ ಹೆಚ್ಚಿನ ಮಹತ್ವ ನೀಡಿ ಸಾಮಾನ್ಯ ರೋಗಿಗಳನ್ನು ಅಲಕ್ಷಿಸಲಾಗುತ್ತಿದೆ. ಡಯಾಲಿಸಿಸ್ ಚಿಕಿತ್ಸೆಗೆ ಇರುತ್ತಿದ್ದ ಸಿಬ್ಬಂದಿಯನ್ನು ಕೋವಿಡ್ ವಾರ್ಡ್‍ಗೆ ವರ್ಗಾಯಿಸಲಾಗಿದೆ. ಅಲ್ಲದೇ ಡಯಾಲಿಸಿಸ್ ಯಂತ್ರಗಳನ್ನು ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಾರಕ್ಕೆ ಎರಡು ದಿನಗಳ ಕಾಲ ಮಾಡುತ್ತಿದ್ದ ಡಯಾಲಿಸಿಸ್‍ನ್ನು ವಾರಕ್ಕೆ ಒಂದು ದಿನಕ್ಕೆ ಇಳಿಸಿದರೂ, ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ವಾರಕ್ಕೆ ಒಂದು ದಿನವೂ ಸಮರ್ಪಕವಾದ ಚಿಕಿತ್ಸೆ ದೊರೆಯದೇ ರೋಗಿಗಳು ಪರದಾಡುವಂತಾಗಿದೆ. ಡಯಾಲಿಸಿಸ್ ಅಗತ್ಯವಿರುವ ರೋಗಿಗಳು ಇನ್ನಷ್ಟು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದರು.
ಕೂಡಲೇ ಡಯಾಲಿಸಿಸ್ ವಿಭಾಗಕ್ಕೆ 6 ಸಿಬ್ಬಂದಿಯನ್ನು ನೇಮಿಸಬೇಕು. ಡಯಾಲಿಸಿಸ್ ಚಿಕಿತ್ಸೆಯಲ್ಲಿ ಇರುವ ಅವ್ಯವಸ್ಥೆ ಹೋಗಲಾಡಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ಅವರಿಗೆ ಮನವಿ ಸಲ್ಲಿಸಿದರು.