ಬೆಳಗಾವಿ : ಕೇಂದ್ರದಂತೆ ಕೃಷಿ ಕಾನೂನು ಹಿಂಪಡೆಯಲು ರೈತ ಸಂಘಟನೆ ಮುಖಂಡರು ರಾಜ್ಯ ಸರಕಾರಕ್ಕೆ ಡಿ. 20ವರೆಗೆ ಗಡುವು ನೀಡುವ ಮೂಲಕ ಪ್ರತಿಭಟನೆಯನ್ನ ತಾತ್ಕಾಲಿಕವಾಗಿ ಹಿಂಪಡೆದರು.
ಡಿ. 20ರೊಳಗೆ ಬೇಡಿಕೆ ಈಡೇರದಿದ್ದರೆ ಬೆಳಗಾವಿಯ ಚೆನ್ನಮ್ಮ ವೃತ್ತದಿಂದ ಸುವರ್ಣಸೌಧದವರೆಗೆ ಬಾರಕೋಲ ಚಳವಳಿ ಮೂಲಕ ಮತ್ತೆ ಹೋರಾಟ ಆರಂಭಿಸುವ ಎಚ್ಚರಿಕೆಯನ್ನೂ ನೀಡಿದರು. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಇಲ್ಲಿನ ಸುವರ್ಣಸೌಧದ ಎದುರಿನ ಕೊಂಡುಸಕೊಪ್ಪದಲ್ಲಿ ಬೆಳಗ್ಗೆಯಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರು.
ಪ್ರತಿಭಟನಾ ಸ್ಥಳಕ್ಕೆ ಸರ್ಕಾರದ ಪ್ರತಿನಿಧಿಯಾಗಿ ಸಚಿವರಾದ ಬಿ.ಸಿ ಪಾಟೀಲ್ ಹಾಗೂ ಭೈರತಿ ಬಸವರಾಜ್ ಆಗಮಿಸಿ ಹೋರಾಟಗಾರರೊಂದಿಗೆ ಚರ್ಚಿಸಿದರು. ತಮ್ಮ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಸಚಿವರು ಹೋರಾಟಗಾರರಿಗೆ ತಿಳಿಸಿದರು. ಆಗ ಸಚಿವರನ್ನು ಹೋರಾಟಗಾರರು ಬೀಳ್ಕೋಟ್ಟರು. ಬಳಿಕ ರೈತ ಮುಖಂಡರು ಸರ್ಕಾರಕ್ಕೆ ಆರು ದಿನಗಳ ಕಾಲ ಸಮಯಾವಕಾಶ ನೀಡಿ, ಡಿ. 20ರವರೆಗೆ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯುವ ನಿರ್ಣಯ ಕೈಗೊಂಡರು.
ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದ್ದೇನು..?
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಬಿ.ಸಿ. ಪಾಟೀಲ್, ಕೇಂದ್ರ ಸರ್ಕಾರ ಈಗಾಗಲೇ ಮೂರು ಕೃಷಿ ಕಾಯ್ದೆಯನ್ನು ಹಿಂಪಡೆದಿದೆ. ರಾಜ್ಯ ಸರ್ಕಾರ ಕೂಡ ಕಾಯ್ದೆ ಹಿಂಪಡೆಯುವಂತೆ ಒತ್ತಾಯಗಳಿವೆ. ರೈತ ಮುಖಂಡರ ಬೇಡಿಕೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಂಪುಟ ಸಹೋದ್ಯೋಗಿಗಳಿಗೆ ಮನವರಿಕೆ ಮಾಡಿಕೊಡುತ್ತೇನೆ. ಮುಖ್ಯಮಂತ್ರಿಗಳು ಬೆಳಗಾವಿಯಲ್ಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಸಭೆಯಲ್ಲಿ ಪಾಲ್ಗೊಳ್ಳಲು ವಾರಾಣಸಿಗೆ ತೆರಳಿದ್ದಾರೆ.
ಬೆಳಗಾವಿಗೆ ನಾಳೆ ಸಿಎಂ ಹಿಂದುರುಗಲಿದ್ದು, ರೈತರ ಬೇಡಿಕೆಗಳನ್ನು ಅವರ ಗಮನಕ್ಕೆ ತರುತ್ತೇನೆ. ಎರಡು ಹೆಕ್ಟರ್ ಒಳಗೆ ಜಮೀನು ಹೊಂದಿರುವ ರೈತರಿಗೆ ಹನಿನೀರಾವರಿ ಅಳವಡಿಕೆಗೆ ಸಬ್ಸಿಡಿ ಮುಂದುವರಿಸಲಾಗುವುದು. ಈ ಮೊದಲು ಕೇಂದ್ರ ಸರ್ಕಾರ ಶೇ. 50 ಹಾಗೂ ರಾಜ್ಯ ಸರ್ಕಾರದ ಶೇ. 40 ಸೇರಿ ಶೇ 90ರಷ್ಟು ಸಬ್ಸಿಡಿ ನೀಡಲಾಗುತ್ತಿತ್ತು.
ಇದನ್ನೂ ಓದಿ : ಮನೆಗೆ ತೆರಳಿದ ರೈತರು: ಒಂದು ವರ್ಷದ ಬಳಿಕ ಟಿಕ್ರಿ ಗಡಿ ಸಂಚಾರ ಮುಕ್ತ
ಆದರೆ, ಕೇಂದ್ರ ಸರ್ಕಾರ ಕೋವಿಡ್ ಕಾರಣಕ್ಕೆ ಸಬ್ಸಿಡಿ ನಿಲ್ಲಿಸಿದೆ. ಆದರೆ, ಇದೀಗ ಮುಖ್ಯಮಂತ್ರಿಗಳು ಸಬ್ಸಿಡಿ ನೀಡಲು ಒಪ್ಪಿದ್ದಾರೆ. ಸಬ್ಸಿಡಿ ಬಯಸುವ ರೈತರು ನೋಂದಣಿ ಮಾಡಿಸಿಕೊಳ್ಳಬೇಕು. ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಆದೇಶ ಪತ್ರ ಇನ್ನೂ ಹೊರಬಿದ್ದಿಲ್ಲ. ಆದರೆ, ಕೃಷಿ ಇಲಾಖೆಯ ಎಲ್ಲ ನಿರ್ದೆಶಕರಿಗೆ ನೋಂದಣಿ ಆರಂಭಿಸಿಕೊಳ್ಳುವಂತೆ ಮೌಖಿಕವಾಗಿ ಸೂಚನೆ ನೀಡಲಾಗಿದೆ ಎಂದರು.
ಸೌಧದ ಮುತ್ತಿಗೆಗೆ ಯತ್ನ ವಿಫಲಗೊಳಿಸಿದ ಪೊಲೀಸರು:
ಬೆಳಗ್ಗೆ ಹಿರೇಬಾಗೇವಾಡಿ ಟೂಲ್ ಬಳಿ ಜಮಾವಣೆಗೊಂಡಿದ್ದ ರೈತರು ಪಾದಯಾತ್ರೆ ಮೂಲಕ ಸುವರ್ಣಸೌಧ ಮುತ್ತಿಗೆಗೆ ನಿರ್ಧರಿಸಿದ್ದರು. ಆದರೆ, ರೈತರನ್ನು ವಶಕ್ಕೆ ಪಡೆದ ಪೊಲೀಸರು, ಬಸ್ನಲ್ಲಿ ಕೂರಿಸಿಕೊಂಡು ಕೊಂಡುಸಕೊಪ್ಪಕ್ಕೆ ಕರೆತಂದರು.
ಬೆಳಗ್ಗೆ 11ರಿಂದ ಪ್ರತಿಭಟನೆ ನಡೆಸಿದ ರೈತರು, ಸರ್ಕಾರದ ಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿ ಅಹವಾಲು ಆಲಿಸಬೇಕು ಎಂದು ಪಟ್ಟು ಹಿಡಿದರು. ಇಲ್ಲವಾದರೆ ಸುವರ್ಣಸೌಧ ಮುತ್ತಿಗೆ ಹಾಕುವ ಬೆದರಿಕೆಯನ್ನೂ ಹಾಕಿದ್ದರು.
ನಂತರ ಸಚಿವರನ್ನು ಸ್ಥಳಕ್ಕೆ ಕರೆಯಿಸಿ ಹೋರಾಟಗಾರರೊಂದಿಗೆ ಚರ್ಚೆಗೆ ಪೊಲೀಸರು ಅನುಕೂಲ ಮಾಡಿಕೊಟ್ಟರು. ಸರ್ಕಾರದ ಪ್ರತಿನಿಧಿಗಳಾಗಿ ಬಂದಿದ್ದ ಸಚಿವ ಬಿ.ಸಿ ಪಾಟೀಲ್ ಹಾಗೂ ಭೈರತಿ ಬಸವರಾಜ್ ಅವರ ಮನವಿಗೆ ರೈತರು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದರು. ಇಂದು ಒಂದೇ ದಿನ ಎರಡು ಭಾರಿ ಸುವರ್ಣಸೌಧ ಮುತ್ತಿಗೆ ನಿರ್ಧರಿಸಿದ್ದ ಹೋರಾಟಗಾರರ ಯತ್ನವನ್ನು ವಿಫಲಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾದರು.