ಅಥಣಿ (ಬೆಳಗಾವಿ): ತಾಲೂಕಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ತಾಲೂಕಿನ ವೈದ್ಯರ ಜೊತೆಗೂಡಿ ಖಾಸಗಿ ಕಟ್ಟಡವನ್ನು ಬಾಡಿಗೆಗೆ ತೆಗೆದುಕೊಂಡು ಸಮಾಜಕ್ಕೆ ತಮ್ಮದೇ ಆದಂತಹ ಸೇವೆ ಸಲ್ಲಿಸುವುದಕ್ಕೆ ಕೊರೊನಾ ಆಸ್ಪತ್ರೆಯನ್ನು ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಶಾಸಕ ಮಹೇಶ್ ಕುಮಟಳ್ಳಿ ಉದ್ಘಾಟಿಸಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸವದಿ, ತಾಲೂಕಿನ ವೈದ್ಯರು ಜೊತೆಗೂಡಿ ಕೊರೊನಾ ಆಸ್ಪತ್ರೆ ಪ್ರಾರಂಭಿಸಿದ್ದಾರೆ. ಸಮಾಜದ ಕಷ್ಟದ ಸಮಯದಲ್ಲಿ ಸಹಾಯ ಮಾಡಬೇಕೆಂಬ ಮಹದಾಸೆಯಿಂದ ವೈದ್ಯರು ಕೋವಿಡ್-19 ಆಸ್ಪತ್ರೆ ಪ್ರಾರಂಭಿಸಿದ್ದಾರೆ. ಇನ್ನು ಎರಡು ದಿನಗಳಲ್ಲಿ ಆಸ್ಪತ್ರೆ ಪ್ರಾರಂಭಗೊಳ್ಳುತ್ತದೆ. ತಾಲೂಕಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಸರ್ಕಾರದ ಪರವಾಗಿ ಆಸ್ಪತ್ರೆ ನಿರ್ಮಾಣ ಮಾಡಿರುವ ವೈದ್ಯರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಸಾರಿಗೆ ಇಲಾಖೆಯಿಂದ ಬಸ್ಗಳಲ್ಲಿ ಫೀವರ್ ಕ್ಲಿನಿಕ್ ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಅಥಣಿಗೆ ಒಂದು ಬಸ್ ಕಳುಹಿಸುವುದಕ್ಕೆ ಕ್ರಮ ಕೈಗೊಳ್ಳುತ್ತೇವೆ. ಬೆಂಗಳೂರು ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದಲ್ಲಿ ಹಲವಾರು ಸಂಘ-ಸಂಸ್ಥೆಗಳ ನೆರವಿನೊಂದಿಗೆ ಇನ್ನೂರು ಬೆಡ್ಗಳುಳ್ಳ ಕೋವಿಡ್ ಆಸ್ಪತ್ರೆ ನಿರ್ಮಾಣವಾಗಿದೆ. ಅದರಲ್ಲಿ 100 ಬೆಡ್ ಸಾರ್ವಜನಿಕರಿಗೆ ಒದಗಿಸಲಾಗುವುದು ಹಾಗೂ 100 ಬೆಡ್ ನಮ್ಮ ಸಾರಿಗೆ ಇಲಾಖೆ ಸಿಬ್ಬಂದಿಗೆ ಉಪಯೋಗಿಸಿಕೊಂಡು ಉಚಿತವಾಗಿ ಆರೋಗ್ಯ ಸೇವೆ ನೀಡಲಾಗುತ್ತದೆ. ಅದರಿಂದ ನಮ್ಮ ಸಿಬ್ಬಂದಿ ವರ್ಗಕ್ಕೆ ಅನುಕೂಲವಾಗುತ್ತದೆ. ಮುಂದಿನ ಹಂತಗಳಲ್ಲಿ ಹೆಚ್ಚಿನ ಬೆಡ್ ನಿರ್ಮಾಣ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಕೊರೊನಾ ವೈರಸ್ ಬಂದ ಮೇಲೆ ಸಾರಿಗೆ ಇಲಾಖೆಗೆ 700 ಕೋ.ರೂ.ಗಿಂತಲೂ ಹೆಚ್ಚು ಹಾನಿ ಸಂಭವಿಸಿದೆ. ಎಲ್ಲಾ ಇಲಾಖೆಗಳಿಗಿಂತ ಸಾರಿಗೆ ಇಲಾಖೆಗೆ ತುಂಬಾ ನಷ್ಟ ಸಂಭವಿಸಿದೆ. ಸಾರಿಗೆ ಇಲಾಖೆಯ 1.30 ಲಕ್ಷ ಸಿಬ್ಬಂದಿಗೆ ಆರು ತಿಂಗಳ ಸಂಬಳವನ್ನು ಮುಖ್ಯಮಂತ್ರಿ ಅವರು ನಮ್ಮ ಇಲಾಖೆಗೆ ಹಣ ಬಿಡುಗಡೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಾರಿಗೆ ಇಲಾಖೆಯಲ್ಲಿ ಬದಲಾವಣೆ ಮಾಡಲಾಗುತ್ತದೆ. ಸಾರಿಗೆ ಇಲಾಖೆಯಿಂದ ಕೊರಿಯರ್ ಸರ್ವಿಸ್ ಪ್ರಾರಂಭಿಸುತ್ತಿದ್ದೇವೆ. ಸದ್ಯ ಅದರ ಟೆಂಡರ್ ಪ್ರತಿಕ್ರಿಯೆ ಮುಗಿದಿದೆ. ಕೆಲವೇ ದಿನಗಳಲ್ಲಿ ಜನಸಾಮಾನ್ಯರಿಗೆ ಸಾರಿಗೆ ಇಲಾಖೆಯಿಂದ ಕೋರಿಯರ್ ಸರ್ವಿಸ್ ಒದಗಿಸಲಾಗುವುದು. ಪ್ರತಿ ಹಳ್ಳಿಹಳ್ಳಿಗೂ ಸೇವೆ ಲಭ್ಯವಾಗುತ್ತದೆ ಎಂದು ತಿಳಿಸಿದರು.