ಚಿಕ್ಕೋಡಿ : ಚಿಕ್ಕೋಡಿ ಉಪವಿಭಾಗದಲ್ಲಿ ಹಾಗೂ ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಮಳೆ ತಗ್ಗಿರುವುದು ಮತ್ತು ವಿವಿಧ ಜಲಾಶಯಗಳಿಂದ ಬಿಡುಗಡೆ ಮಾಡುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ದತ್ತವಾಡ - ಮಲಿಕವಾಡ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ.
ವೇದಗಂಗಾ ನದಿಯ ಭೋಜ - ಹುನ್ನರಗಿ, ಭೋಜಬಾಡಿ - ಕೊನ್ನೂರ, ಸಿದ್ನಾಳ - ಅಕೋಳ ಮತ್ತು ಭೀಮಸಿ - ಜತ್ರಾಟ ಹಾಗೂ ದೂಧಗಂಗಾ ನದಿಗೆ ಅಡ್ಡಲಾಗಿರುವ ಕಾರದಗಾ - ಭೋಜ, ದತ್ತವಾಡ - ಮಲಿಕವಾಡ ಸಂಚಾರಕ್ಕೆ ಮುಕ್ತಗೊಂಡಿದ್ದು, ಕೃಷ್ಣಾ ನದಿಗೆ ಅಡ್ಡಲಾಗಿರುವ ಯಡೂರ - ಕಲ್ಲೋಳ ಬ್ಯಾರೇಜ್ ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ.
ಕಳೆದ ವರ್ಷ ಬಂದ ಪ್ರವಾಹದಿಂದ ನದಿ ತೀರದ ಗ್ರಾಮಗಳು ಪ್ರವಾಹ ಎದುರಿಸುವಂತ ಪರಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿತ್ತು. ಆದರೆ, ಈ ಬಾರಿ ಕರ್ನಾಟಕ - ಮಹಾರಾಷ್ಟ್ರ ಎರಡು ರಾಜ್ಯಗಳು ನೀರು ನಿರ್ವಹಣೆ ಕುರಿತು ಹೊಂದಾಣಿಕೆ ಮಾಡಿಕೊಂಡು ಪ್ರಸಕ್ತ ಸಾಲಿನ ಪ್ರವಾಹ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದು, ಈ ಬಾರಿ ಚಿಕ್ಕೋಡಿ ಉಪವಿಭಾಗದ ನದಿ ತೀರದ ಜನರಲ್ಲಿ ಕಳೆದ ಬಾರಿಯಷ್ಟು ನಷ್ಟವಾಗಿಲ್ಲ.