ಬೆಳಗಾವಿ : ಜಿಲ್ಲೆಯಲ್ಲಿ ಜನರ ಸಹಕಾರ ಹಾಗೂ ಮಾರ್ಗಸೂಚಿಗಳ ಪಾಲನೆಯಿಂದಾಗಿ ಕೋವಿಡ್-19 ವೈರಾಣು ಹರಡುವಿಕೆ ಇಳಿಕೆಯಾಗಿದೆ.
ಮುಂದಿನ ದಿನಗಳಲ್ಲಿಯೂ ಕೋವಿಡ್-19 ವೈರಾಣು ಹರಡುವಿಕೆ ನಿಯಂತ್ರಣಕ್ಕಾಗಿ ಒಂದೇ ಸಮಯದಲ್ಲಿ ಸಾರ್ವಜನಿಕರ ಒಗ್ಗೂಡುವಿಕೆಯನ್ನು ಗರಿಷ್ಠ 400 ಜನರ ಪಾಲ್ಗೊಳ್ಳುವಿಕೆಗೆ ಸೀಮಿತಗೊಳಿಸಿ ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಅವರು ಆದೇಶಿಸಿದ್ದಾರೆ.
ಜಿಲ್ಲೆಯ ಸಮಸ್ತ ಸಾರ್ವಜನಿಕರು, ಸಂಘ-ಸಂಸ್ಥೆಗಳು ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸುವ ಪೂರ್ವದಲ್ಲಿ ಬೆಳಗಾವಿ ನಗರ ಮಟ್ಟದಲ್ಲಿ ಪೊಲೀಸ್ ಆಯುಕ್ತರು, ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ಉಪವಿಭಾಗದ ಕೇಂದ್ರ ಸ್ಥಾನದಲ್ಲಿ ಸಂಬಂಧಪಟ್ಟ ಉಪವಿಭಾಗಾಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಬೇಕು.
ಹಾಗೆಯೇ, ತಾಲೂಕು ಮಟ್ಟದಲ್ಲಿ ಸಂಬಂಧಿತ ತಹಶೀಲ್ದಾರರಿಂದ ಅನುಮತಿ ಪಡೆದು ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವುದರೊಂದಿಗೆ ಆಯೋಜಿಸಲು ತಿಳಿಸಲಾಗಿದೆ.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲಾ ಪ್ರಜ್ಞಾವಂತ ನಾಗರಿಕರು ಈ ವೈರಾಣುವಿನಿಂದ ಸೋಂಕು ಹರಡದಂತೆ ತಡೆಗಟ್ಟಲು ಜಿಲ್ಲಾಡಳಿತವು ಕಾಲ ಕಾಲಕ್ಕೆ ತೆಗೆದುಕೊಳ್ಳಬಹುದಾದ ತೀರ್ಮಾನಗಳಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಸೂಚಿಸಿದ್ದಾರೆ.
ಓದಿ: 15ರ ಬಾಲಕಿ ಮೇಲೆ ಗ್ಯಾಂಗ್ರೇಪ್, ಸಿಗರೇಟ್ನಿಂದ ಎದೆ ಸುಟ್ಟು, ಕೊಲೆ ; ಮರಕ್ಕೆ ಮೃತದೇಹ ನೇಣು