ಚಿಕ್ಕೋಡಿ : ಪ್ರವಾಹದಿಂದ ತತ್ತರಿಸಿದ್ದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕುರಣಿ ಗ್ರಾಮದ ಹಿರಣ್ಯಕೇಶಿ ನದಿ ತೀರದ ಜನರಿಗೆ ಇದೀಗ ಮೊಸಳೆ ಕಾಟ ಶುರುವಾಗಿದೆ.
ಕಳೆದ ಹಲವು ದಿನಗಳಿಂದ ನದಿ ದಡದಲ್ಲಿ ಮೊಸಳೆ ಕಾಣಿಸಿಕೊಂಡಿದ್ದು, ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕುರಣಿ ಗ್ರಾಮದ ಜನರಿಗೆ ಮೊಸಳೆ ಕಾಣಿಸಿಕೊಂಡಿದ್ದು, ಕೋಚರಿ ಬ್ಯಾರೇಜ್‍ನಿಂದ ಹೊಳೆಮ್ಮ ದೇವಿ ದೇವಸ್ಥಾನದವರೆಗಿನ ಬ್ಯಾರೇಜ್ವರೆಗೆ ಮೊಸಳೆಗಳು ಇವೆ ಎನ್ನಲಾಗುತ್ತಿದೆ.
ನದಿ ತೀರದಲ್ಲಿ ಜಾನುವಾರುಗಳ ಹಾಗೂ ಬಟ್ಟೆಗಳನ್ನು ತೊಳೆಯಬೇಡಿ ಎಂಬ ನೋಟಿಸ್ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ಮೀನುಗಾರರಿಗೂ ನದಿಗೆ ಇಳಿಯದಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.
ಪ್ರವಾಹದ ಸಂದರ್ಭದಲ್ಲಿ ನದಿಯಲ್ಲಿನ ವಿಷ ಜಂತುಗಳು ಜಮೀನು ಹಾಗೂ ಗ್ರಾಮಗಳಿಗೆ ನುಗ್ಗಿದ್ದವು. ಪ್ರವಾಹ ತಗ್ಗಿ ಹಲವು ದಿನಗಳ ನಂತರ ಇದೀಗ ಹಿರಣ್ಯಕೇಶಿ ನದಿಯ ದಡದಲ್ಲಿ ಮೊಸಳೆಗಳು ಕಾಣಿಸಿಕೊಂಡಿವೆ.