ಬೆಳಗಾವಿ: ಲಾಕ್ಡೌನ್ ಜಾರಿಯಿಂದ ಲಸಿಕೆ ಪಡೆಯಲು ನಡೆದುಕೊಂಡೇ ಬಂದಿದ್ದ ಸಾರ್ವಜನಿಕರು ಲಸಿಕೆಗಾಗಿ ಪರಿದಾಡಿದ ಘಟನೆ ನಗರದ ಬಿಮ್ಸ್ ಆವರಣದಲ್ಲಿ ನಡೆದಿದೆ.
ಕೋವಿಶೀಲ್ಡ್ ಲಸಿಕೆಯ ಮೊದಲನೇ ಡೋಸ್ ಪಡೆಯಲು ಜನರು ಬೆಳಗ್ಗೆ 8ಕ್ಕೆ ಆಗಮಿಸಿದ್ದರು. ಇಂದು, ನಾಳೆ ಬೆಳಗಾವಿಯಲ್ಲಿ ಲಾಕ್ಡೌನ್ ಜಾರಿಯಿದ್ದು, ಬೈಕ್ ಸೀಜ್ ಮಾಡುತ್ತಾರೆ ಎಂಬ ಭಯದಿಂದ ಜನ ಲಸಿಕೆ ಪಡೆಯಲು ನಡೆದುಕೊಂಡೇ ಬಂದಿದ್ದರು. ಕೋವಿಶೀಲ್ಡ್ ಮೊದಲನೇ ಡೋಸ್ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿತ್ತು. ಹೀಗಾಗಿ ಬೆಳಗ್ಗೆಯಿಂದಲೇ ಬಿಮ್ಸ್ ಆವರಣದಲ್ಲಿ ಜನರು ಸಾಲುಗಟ್ಟಿ ನಿಂತಿದ್ದರು.
ಆದರೆ ಕೋವಿಶೀಲ್ಡ್ ಸ್ಟಾಕ್ ಮುಗಿದಿದೆ. ಕೋವ್ಯಾಕ್ಸಿನ್ ಎರಡನೇ ಡೋಸ್ ಲಭ್ಯವಿದೆ ಎಂದು ಬಿಮ್ಸ್ ಸಿಬ್ಬಂದಿ ಸೂಚನಾ ಪತ್ರ ಅಂಟಿಸಿದ್ದಾರೆ. ಹೀಗಾಗಿ ಲಸಿಕೆ ಪಡೆಯಲು ಬಂದ ಜನರು ಪರದಾಟ ನಡೆಸಿದರು. ಬೆಳಗ್ಗೆಯಿಂದಲೇ ಬಿಮ್ಸ್ ಲಸಿಕೆ ಕೇಂದ್ರದ ಎದುರು ಜನ ಸಾಲುಗಟ್ಟಿ ನಿಂತಿದ್ದರು.
ಆನ್‌ಲೈನ್ ಮೀಟಿಂಗ್ ಮಾಡುತ್ತಿದ್ದೇವೆ ಎಂದು ಇಲ್ಲಿನ ಸಿಬ್ಬಂದಿ ಬ್ಯುಸಿ ಆಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನಿತ್ಯವೂ ಬಂದು ಹೋಗುತ್ತಿದ್ದೇವೆ. ಬಿಮ್ಸ್ ಲಸಿಕಾಕರಣ ಸಿಬ್ಬಂದಿ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.