ಬೆಂಗಳೂರು : 2023-24ನೇ ಸಾಲಿನ ಪೂರಕ ಅಂದಾಜುಗಳು (ಒಂದನೇ ಕಂತು) ಕುರಿತಂತೆ ವಿಧಾನ ಪರಿಷತ್ತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 3542 ಕೋಟಿ ರೂ. ಗಳ ಪೂರಕ ಅಂದಾಜುಗಳ ಒಂದನೇ ಕಂತಿಗೆ ಅನುಮೋದನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಈ ಪೂರಕ ಅಂದಾಜಿನಲ್ಲಿ ರಾಜ್ಯದ ಆರ್ಥಿಕ ಪ್ರಗತಿ ಮತ್ತು ಸಂಪನ್ಮೂಲ ಸೃಜನೆಗೆ ಒತ್ತು ನೀಡುವ ದೃಷ್ಟಿಯಿಂದ 915 ಕೋಟಿ ರೂ. ಗಳನ್ನು ಬಂಡವಾಳ ವೆಚ್ಚಕ್ಕೆ ಒದಗಿಸಲಾಗಿದೆ ಎಂದು ತಿಳಿಸಿದರು.
ಪೂರಕ ಅಂದಾಜುಗಳ ಒಂದನೇ ಕಂತಿಗೆ ಅನುಮೋದನೆ : 2023-24 ನೇ ಸಾಲಿನ ಆಯವ್ಯಯದಲ್ಲಿ ಒಟ್ಟು ಅಭಿಯಾಚನೆ ಮಾಡಿದ ಮೊತ್ತ 3,41,321 ಕೋಟಿ ರೂ. ಗಳಲ್ಲಿ ಪೂರಕ ಅಂದಾಜಿನ ಮೊದಲನೇ ಕಂತಿನಲ್ಲಿ ಒದಗಿಸಿದ ಒಟ್ಟು ಮೊತ್ತ 3,542 ಕೋಟಿ ರೂ.ಗಳಾಗಿದ್ದು, ಇದು ಒಟ್ಟು ಅಭಿಯಾಚನೆ ಮಾಡಿದ ಮೊತ್ತದ ಶೇ.1 ರಷ್ಟಾಗಿದೆ. ಇದರಲ್ಲಿ ರಾಜಸ್ವ ಖಾತೆಯಲ್ಲಿ 2677 ಕೋಟಿ ರೂ.ಗಳು ಮತ್ತು ಬಂಡವಾಳ ಖಾತೆಯಲ್ಲಿ 915 ಕೋಟಿ ರೂ.ಗಳಾಗಿದೆ. ಈ ಹೆಚ್ಚುವರಿ ಅನುದಾನದಲ್ಲಿ ಕೇಂದ್ರ ಸರ್ಕಾರದ ಸ್ವೀಕೃತಿಗಳಿಂದ 684 ಕೋಟಿ ರೂ. ಗಳು ಮತ್ತು ರಿಸರ್ವ್ ಫಂಡ್ ಠೇವಣಿಗಳಿಂದ 327 ಕೋಟಿ ರೂ. ಗಳನ್ನು ಭರಿಸಲಾಗುವುದು. ಆದ್ದರಿಂದ ನಿವ್ವಳ ಹೊರ ಹೋಗುವ ಮೊತ್ತವು 2531 ಕೋಟಿ ರೂ. ಗಳು ಮಾತ್ರವಾಗಿದೆ. ಈ ಮೊತ್ತವನ್ನು ಸ್ವಂತ ರಾಜಸ್ವ ಸ್ವೀಕೃತಿಗಳಿಂದ, ಕೇಂದ್ರ ಸರ್ಕಾರದಿಂದ ಸ್ವೀಕೃತವಾಗುವ ತೆರಿಗೆ ಪಾಲಿನ ಹೆಚ್ಚಳ, ಭಾರತ ಸರ್ಕಾರದ ವಿಶೇಷ ಬಂಡವಾಳ ಸಹಾಯ ಯೋಜನೆ ಮತ್ತು ಅಗತ್ಯವಿದ್ದಲ್ಲಿ ವೆಚ್ಚದ ಮರು ಪ್ರಾಧಾನ್ಯತೆ ಮತ್ತು ವೆಚ್ಚದಲ್ಲಿ ಸಂಭವನೀಯ ಉಳಿತಾಯದ ಮೂಲಕ ಭರಿಸಲಾಗುವುದು ಎಂದು ವಿವರಿಸಿದರು.
ವಿವಿಧ ವೆಚ್ಚಗಳ ವಿವರ : ಇದರಲ್ಲಿ ಮುಖ್ಯವಾಗಿ ಸಮಾಜ ಕಲ್ಯಾಣ ಇಲಾಖೆಗೆ ಎಸ್‍ಸಿಎಸ್‍ಪಿ ಟಿಎಸ್‍ಪಿ ಹಣದಲ್ಲಿ 390 ಕೋಟಿ ರೂ.ಗಳು ಟಿಎಸ್ಪಿನಲ್ಲಿ 118 ಒಟ್ಟು ವಸತಿಶಾಲಾ ಕಟ್ಟಡ ನಿರ್ಮಾಣ-ನಿರ್ವಹಣೆಗೆ 508 ಕೋಟಿ ರೂ ಕೊಡಲಾಗಿದೆ. ರಾಜ್ಯ ವಿಪತ್ತು ಪರಿಹಾರ ನಿಧಿ 502 ಕೋಟಿ, ಸಮಗ್ರ ಶಿಶು ಆರೋಗ್ಯ ಯೋಜನೆಗೆ 310 ಕೋಟಿ, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ 297 ಕೋಟಿ ರೂ, ಐಸಿಡಿಎಸ್ ಕೋಶಕ್ಕೆ 284 ಕೋಟಿ, ಕರ್ನಾಟಕ ರಾಜ್ಯ ಉಗ್ರಾಣ ನಿಗಮಕ್ಕೆ ಸಾಲವಾಗಿ 229 ಕೋಟಿ ರೂ, ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕ್ಷೇಮ ಕೇಂದ್ರವಾಗಿ ಪರಿವರ್ತನೆಗೆ 180 ಕೋಟಿ ರೂ, ನಬಾರ್ಡ್ ರಸ್ತೆ ಕಾಮಗಾರಿಗೆ 150 ಕೋಟಿ ರೂ, ಮಕ್ಕಳು ಹದಿಹರೆಯದವರ ಗ್ರಂಥಾಲಯ ಯೋಜನೆಗೆ 132 ಕೋಟಿ ರೂ, ಕೃಷಿ ಭಾಗ್ಯಕ್ಕೆ 100 ಕೋಟಿ. ಕೇಂದ್ರ ಪುರಸ್ಕೃತ ಯೋಜನೆಯಡಿ 74 ಕೋಟಿ ಕೇಂದ್ರ ಸರ್ಕಾರದಿಂದ ಬರಬೇಕಾಗಿದೆ. 3452 ಕೋಟಿ ರೂ.ಗಳ ಪೂರಕ ಬಜೆಟ್ಗೆ ಅನುಮೋದನೆ ನೀಡಬೇಕೆಂದು ಮನವಿ ಮಾಡಿದರು.
ಈ ಕುರಿತು ಪರಿಷತ್ತಿನಲ್ಲಿ ಸದಸ್ಯರು ಕೇಳಿದ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಬಜೆಟ್ ನಂತರ ಯಾವುದೇ ಬಾಬ್ತಿಗೆ ಅನುದಾನ ಕಡಿಮೆಯಾಗಿದ್ದರೆ, ಅದಕ್ಕೆ ಹೆಚ್ಚು ದುಡ್ಡು ಬೇಕಾದಲ್ಲಿ, ಹೊಸ ಖರ್ಚು ಬಂದರೆ, ಅದಕ್ಕೆ ತಾತ್ಕಾಲಿಕವಾಗಿ contingency fund ನಿಂದ ಬಿಡುಗಡೆಯಾಗುತ್ತದೆ. ಬಜೆಟ್ ನಿಗದಿಪಡಿಸಿರುವ ಮಧ್ಯೆ ಅನುದಾನ ಬೇಕಾದರೆ, ಅಂತಹ ಖರ್ಚು ಮಾಡಿರುವುದಕ್ಕೆ ಪೂರಕ ಬಜೆಟ್ ಮಂಡಿಸಲಾಗುತ್ತದೆ. 2022-23ರಲ್ಲಿ 13,573 ಕೋಟಿ ರೂ notional ಉಳಿಕೆಯಾಗಿದೆ.
ಈ ಮೊತ್ತವನ್ನು 3,27,747 ಕೋಟಿ ಈ ವರ್ಷದ ಖರ್ಚು ಇರುತ್ತದೆ. ಉಳಿಕೆ ಮೊತ್ತವನ್ನೂ ಸೇರಿಸಿ, 3,41,321 ಕೋಟಿ ರೂ. ಖರ್ಚಿಗೆ ಒಪ್ಪಿಗೆ ತೆಗೆದುಕೊಂಡಿರುತ್ತದೆ. ಯಾವುದೇ ಖರ್ಚು ಹಾಗೂ ಉಳಿಕೆಗಳಿಗೆ ಸದನದ ಒಪ್ಪಿಗೆ ಪಡೆಯಬೇಕಾಗುತ್ತದೆ. ಸದನವೆಂಬುದು ಸಾರ್ವಭೌಮ, ಇಲ್ಲಿ ಒಪ್ಪಿಗೆ ದೊರೆಯಬೇಕು. notional expenditure ಕೂಡ ಬಜೆಟ್ನಲ್ಲಿ ಸೇರಿ 3452.1 ಕೋಟಿ, outflow 2531 ಕೋಟಿ ರೂ. ಆಗಿರುತ್ತದೆ. ಕೆಲವೊಂದು ವೆಚ್ಚಗಳು ಬಜೆಟ್ನಲ್ಲಿ ನಮೂದಾಗಿರುವುದಿಲ್ಲ. ಆದರೆ ಪ್ರಕೃತಿ ವಿಕೋಪ, ಬರ ಪರಿಸ್ಥಿತಿ ನಿರ್ವಹಿಸಲು ಇಂತಹ ದುಡ್ಡು ಖರ್ಚಾಗುತ್ತದೆ. ರೈತರಿಗೆ 2000 ರೂ. ನೀಡುತ್ತಿರುವುದು ತಾತ್ಕಾಲಿಕ ಮೊದಲನೇ ಕಂತು. ನಂತರ ಕೇಂದ್ರದ ದುಡ್ಡು ಬಂದ ಮೇಲೆ ಪೂರ್ಣ input subsidy ಕೊಡಲಾಗುವುದು ಎಂದು ಸದನಕ್ಕೆ ತಿಳಿಸಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಬಗ್ಗೆ ಬಿಜೆಪಿಯವರು ಕೇವಲ ಮಾತನಾಡುತ್ತಾರೆ. 2013ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತಂದ ಕಾನೂನನ್ನು, ಬಿಜೆಪಿ ಸರ್ಕಾರ ಯಾವ ರಾಜ್ಯದಲ್ಲಿಯೂ ಮಾಡಿಲ್ಲ. ಇಡೀ ದೇಶದಲ್ಲಿ ತೆಲಂಗಾಣ ಬಿಟ್ಟರೆ ಕರ್ನಾಟಕವೊಂದೇ ಇಂತಹ ಕಾನೂನನ್ನು ಮಾಡಿರುವುದು. ರಾಜ್ಯ ಬಿಜೆಪಿಯವರು ಯಾಕೆ ಸುಮ್ಮನಿದ್ದೀರಿ ಎಂದು ಪ್ರಶ್ನಿಸಿದರು.
‘ಮೊದಲ ಬಾರಿಗೆ ಪ್ರತ್ಯೇಕ ಅನುದಾನ ನೀಡಿದ್ದು ನನ್ನ ಸರ್ಕಾರ’: 2013ರಲ್ಲಿ ಪರಿಶಿಷ್ಟ ಜಾತಿಯವರಿಗೆ ಎಸ್‍ಸಿಎಸ್‍ಪಿ, ಪರಿಶಿಷ್ಟ ವರ್ಗದವರಿಗೆ ಟಿಎಸ್‍ಪಿ ಹಣದ ಕಾನೂನನ್ನು ಮಾಡಿರುವುದು ನನ್ನ ನೇತೃತ್ವದ ಸರ್ಕಾರ. ಈ ಕಾನೂನನ್ನು ಕೇಂದ್ರವೂ ತರಲಿಲ್ಲ, ಎಸ್ಸಿಪಿ/ ಟಿಎಸ್‍ಪಿ ಹಣ ಮುಂಚೆ ದುರುಪಯೋಗವಾಗುತ್ತಿತ್ತು. ಮೊದಲ ಬಾರಿಗೆ ಇವರಿಗೆ ಪ್ರತ್ಯೇಕ ಅನುದಾನವನ್ನು ನೀಡಿದ್ದು ನನ್ನ ಸರ್ಕಾರ. ಮೊದಲು 6 ರಿಂದ 7 ಸಾವಿರ ಕೋಟಿ ವರ್ಷಕ್ಕೆ ಖರ್ಚಾಗುತ್ತಿತ್ತು. ರಾಜ್ಯದಲ್ಲಿ ಶೇ.17.1ರಷ್ಟು ಜನ ಎಸ್ಸಿ, ಎಸ್ಟಿ ಜನರಿದ್ದಾರೆ. ಜನಸಂಖ್ಯೆ ಅನುಗುಣವಾಗಿ ಅನುದಾನ ಮೀಸಲಿಡುವ ಕಾರ್ಯವನ್ನು ನಾವು ಮಾಡಿದೆವು. ಸಮಾಜದಲ್ಲಿನ ಅವಕಾಶ ವಂಚಿತರೆಲ್ಲರೂ ನನ್ನ ಜನ. ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿರುವವೆಲ್ಲರಿಗೂ ಶಕ್ತಿ ತುಂಬಬೇಕು. ಕೇಂದ್ರ ಸರ್ಕಾರವು ಇಂತಹ ಕ್ರಮವನ್ನು ತೆಗೆದುಕೊಳ್ಳಲಿ , ಇದಕ್ಕಾಗಿ ಸರ್ವ ಪಕ್ಷ ನಿಯೋಗ ಹೋಗೋಣ ಎಂದು ಹೇಳಿದರು.
2008ರಿಂದ 2013 ರವರೆಗೆ 22 ಸಾವಿರ ಕೋಟಿ ವೆಚ್ಚ ಮಾಡಲಾಗಿತ್ತು. ಆದರೆ ನಾನು ಅಧಿಕಾರ ಬಿಡುವಾಗ ಎಸ್ಸಿ, ಎಸ್ಟಿ ಜನರಿಗೆ 88 ಸಾವಿರ ಕೋಟಿ ಅನುದಾನವನ್ನು ನೀಡಲಾಗಿತ್ತು. ಇದು ಕಾಂಗ್ರೆಸ್ ಸರ್ಕಾರದ ಸಾಧನೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ನೈತಿಕ ಹಕ್ಕು ಇಲ್ಲ. ಕಾಂಗ್ರೆಸ್ ಸರ್ಕಾರ ಸಮಾಜಿಕ ನ್ಯಾಯ ಹಾಗು ಸಂವಿಧಾನಕ್ಕೆ ಬದ್ಧವಾಗಿರುತ್ತೇವೆ. ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಅಂದು ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ ಹೆಗಡೆಯವರು ಹೇಳಿದ್ದರು ಎಂದು ಪ್ರತಿಪಕ್ಷದವರ ಆರೋಪಕ್ಕೆ ಉತ್ತರಿಸಿದರು.
ಬಜೆಟ್ ಮಂಡಿಸಿದ ನಂತರ ಬಿಜೆಪಿಯವರ ಯಾರು ಸ್ವರ ಎತ್ತಲಿಲ್ಲ. ಗ್ಯಾರಂಟಿಗಳಿಗೆ 38 ಸಾವಿರ ಕೋಟಿ ರೂ.ವನ್ನು ಗ್ಯಾರಂಟಿ ಜಾರಿಯಾದ 1-8-2023 ರಿಂದ ಮಾರ್ಚ್ ವರೆಗೆ ಮೀಸಲಿಟ್ಟಿದೆ. ಎಲ್ಲವೂ ಪಾರದರ್ಶಕವಾಗಿದೆ. ರೈತರಿಗೆ ಬೇರೆ ಕಾರ್ಯಕ್ರಮಗಳನ್ನು ನೀಡಿರುವುದರಿಂದ ಈ ಬಾರಿ 4000 ರೂ. ಇಟ್ಟಿಲ್ಲ. ಈ ಬಾರಿ 38 ಸಾವಿರ ಕೋಟಿ ಗ್ಯಾರಂಟಿಗಳಿಗೆ ನೀಡಿದೆ. ಫಲಾನುಭವಿಗಳು ಸಂತೋಷವಾಗಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ : 150ಕ್ಕೆ ನರೇಗಾ ಕೂಲಿ ದಿನಗಳ ಹೆಚ್ಚಿಸಲು ಕೇಂದ್ರಕ್ಕೆ ಮರು ಪ್ರಸ್ತಾವನೆ : ಸಚಿವ ಪ್ರಿಯಾಂಕ್ ಖರ್ಗೆ