ಬೆಳಗಾವಿ : ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರ, ಭ್ರಷ್ಟಾಚಾರ ಅಂದ್ರೆ ಕಾಂಗ್ರೆಸ್. ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷದ ಅವಿಭಾಜ್ಯ ಅಂಗ. ಹೀಗಿರುವಾಗ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೈ ನಾಯಕರಿಗೆ ತಿರುಗೇಟು ಕೊಟ್ಟರು. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ನವರು ಸಿಎಂ ಟಾರ್ಗೆಟ್ ಮಾಡಿ ಬಿಜೆಪಿ ಇಮೇಜ್ ಕೆಡಿಸಬೇಕು ಅಂತಿದ್ದಾರೆ. ಆದರೆ ಸಾಧ್ಯವಾಗುತ್ತಿಲ್ಲ. ಇವತ್ತಿಂದ ಅಲ್ಲ ಒಂದೂವರೆ ವರ್ಷದಿಂದ ಸಿದ್ದರಾಮಯ್ಯ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಜನ ನಂಬುತ್ತಿಲ್ಲ, ಏಕೆಂದರೆ ಅವರೇ ದೊಡ್ಡ ಭ್ರಷ್ಟಾಚಾರಿಗಳು ಎಂದು ಆರೋಪಿಸಿದರು.
ನಿಮ್ಮ ಹಾಗೂ ಸಿದ್ದರಾಮಯ್ಯ ಮಧ್ಯೆ ಲಿಂಗಾಯತ ಲಡಾಯಿ ಜೋರಾಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಆ ಲಡಾಯಿ ಏನಿಲ್ಲ, ಅವರೇ ಮಾಡಿಕೊಂಡು ಬೇರೆ ಬೇರೆ ಸ್ಪಷ್ಟೀಕರಣ ಕೊಡುತ್ತ ತಿರುಗುತ್ತಿದ್ದಾರೆ. ಗ್ರೌಂಡ್‌ನಲ್ಲಿ ಲಿಂಗಾಯತರು ಇದ್ಯಾವುದನ್ನು ತಲೆಕೆಡಿಸಿಕೊಳ್ಳಲ್ಲ. ಬಹಳ ಪ್ರಬುದ್ಧವಾಗಿದ್ದಾರೆ, ಯಾರಿಗೆ ಯಾವಾಗ ಹೇಗೆ ಸಪೋರ್ಟ್ ಮಾಡಬೇಕೆಂದು ಲಿಂಗಾಯತರಿಗೆ ಗೊತ್ತು ಎಂದು ಸಿಎಂ ಬೊಮ್ಮಾಯಿ ತಿರುಗೇಟು ಕೊಟ್ಟರು.
ಇಂದು ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಪ್ರಚಾರ ಮಾಡುತ್ತಿರುವೆ. ಎಲ್ಲ ಕಡೆ ರೋಡ್ ಶೋ, ಸಭೆಗಳಲ್ಲಿ ಜನರ ಉತ್ಸಾಹ ದೊಡ್ಡ ಪ್ರಮಾಣದಲ್ಲಿದೆ. ಬೆಳಗಾವಿ ಜಿಲ್ಲೆಯಲ್ಲಿ ಕನಿಷ್ಠ 15 ಸ್ಥಾನ ಗೆಲ್ಲುವ ವಿಶ್ವಾಸವಿದೆ. ಕೆಲವು ಬದಲಾವಣೆ ಮಾಡಿದ್ದಕ್ಕೂ ಜನ ಸ್ಪಂದಿಸಿದ್ದಾರೆ. ನಾನು ರಾಜ್ಯದ ಉದ್ದಗಲಕ್ಕೂ ಸುತ್ತುತ್ತಿದ್ದೇನೆ. ನಾಮಪತ್ರ ವಾಪಸ್ ಪ್ರಕ್ರಿಯೆ ಆದಮೇಲೆ ಬಿಜೆಪಿ ಸುನಾಮಿ ಇಡೀ ರಾಜ್ಯದಲ್ಲಿದೆ. ಬಿಜೆಪಿ ಸ್ಪಷ್ಟ ಬಹುಮತದಿಂದ ಬರಲಿದೆ ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ 40 ಪರ್ಸೆಂಟ್ ಕಮಿಷನ್ ತನಿಖೆ ಎಂಬ ಲಕ್ಷ್ಮಣ ಸವದಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ ಅವರು, ಲಕ್ಷ್ಮಣ ಸವದಿ ನಮ್ಮ ಪಕ್ಷದಲ್ಲಿ ಇದ್ದಾಗಲೇ ಹೇಳಬಹುದಿತ್ತಲ್ಲ, ಏಕೆ ಸುಮ್ಮನಿದ್ದರು..? ಯಾವ ಸ್ಪೇಸಿಪಿಕ್ ಕೇಸ್‌ನಲ್ಲಿ 40 ಪರ್ಸೆಂಟ್ ಹಣ ತಗೊಂಡಿದ್ದೇವೆ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು. ಈ ತರಹ ಗಾಳಿಯಲ್ಲಿ ಗುಂಡು ಹೊಡೆಯುವುದರಿಂದ ಏನೂ ಪ್ರಯೋಜನ ಇಲ್ಲ ಎನ್ನುವ ಮೂಲಕ ಸವದಿಗೆ ಸಿಎಂ ಬೊಮ್ಮಾಯಿ ಟಾಂಗ್ ಕೊಟ್ಟರು.
ದಕ್ಷಿಣ ಕರ್ನಾಟಕದಿಂದ ಪ್ರಚಾರ ಶುರು ಮಾಡಿ ಉತ್ತರಕ್ಕೆ ಬಂದಿರುವೆ. ಎಲ್ಲಾ ಕಡೆ ಅಭೂತಪೂರ್ವ ಜನಬೆಂಬಲ ಇದೆ. ವಿಶೇಷವಾಗಿ ಯುವಕರು, ಮಹಿಳೆಯರು ರೈತರು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸುತ್ತಿದ್ದಾರೆ. ನಮ್ಮ ನಿರೀಕ್ಷೆ ಮೀರಿ ಜನಸ್ಪಂದನೆ ಇದ್ದು, ಸಂಖ್ಯಾ ಬಲದಷ್ಟೇ ಉತ್ಸಾಹ ಕೂಡ ದೊಡ್ಡ ಪ್ರಮಾಣದಲ್ಲಿದೆ. ಈಗ ಎಲ್ಲ ಬಂದಿರೋದು ಹಳೆಯ ಎಕ್ಸಿಟ್ ಪೋಲ್. ನಾವು ಯಾವುದೇ ಎಕ್ಸಿಟ್ ಪೋಲ್ ಆಧಾರದ ಮೇಲೆ ಚುನಾವಣಾ ರಣನೀತಿ ಮಾಡಲ್ಲ. ನಮ್ಮದೇ ಆದಂತಹ ಮಾಹಿತಿ ವ್ಯವಸ್ಥೆ ಇದ್ದು, ಅದರ ಮೇಲೆ ರಣನೀತಿ ಇರುತ್ತೆ. ಗ್ರೌಂಡ್ ರಿಯಾಲಿಟಿ ನೋಡುತ್ತಿದ್ದು ಸ್ಪಷ್ಟ ಬಹುಮತ ಬರುವ ವಿಶ್ವಾಸ ಇದೆ ಎಂದ ಸಿಎಂ ಬೊಮ್ಮಾಯಿ ಹೇಳಿದ್ರು.
ಇದನ್ನೂ ಓದಿ : ಕೆಜೆಪಿ ಕಟ್ಟಿ ದೊಡ್ಡ ಅಪರಾಧ ಮಾಡಿದ್ದೆ.. ರಾಜ್ಯದ ಜನತೆ ಕ್ಷಮೆ ಕೇಳಿದ್ದೇನೆ : ಬಿ. ಎಸ್. ಯಡಿಯೂರಪ್ಪ