ಬೆಳಗಾವಿ: ಕೊರೊನಾ ವಾರಿಯರ್ಸ್ ಮೇಲೆ ಬೆಳಗಾವಿ ತಾಲೂಕಿನ ಮರಣಹೋಳದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಕತಿ ಪೊಲೀಸರು ಓರ್ವನನ್ನು ಬಂಧಿಸಿದ್ದು, ಪರಾರಿಯಾಗಿರುವ 8 ಜನರಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಮರಣಹೋಳ ಗ್ರಾಮದ ಲಕ್ಷ್ಮಣ್ ಪಾಟೀಲ್ ಬಂಧಿತ ಆರೋಪಿ. ಕ್ವಾರಂಟೈನ್ ಕೇಂದ್ರದಲ್ಲಿರುವ ನಾಲ್ವರು ಹಾಗೂ ಗ್ರಾಮದ ನಾಲ್ವರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಗಂಟಲು ಮಾದರಿ ಸಂಗ್ರಹಕ್ಕೆ ಹೋಗಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ಶಂಕಿತರು ಹಲ್ಲೆ ನಡೆಸಿ, ಪುಂಡಾಟ ಮೆರೆದಿದ್ದರು.
ಮಹಾರಾಷ್ಟ್ರದಿಂದ ವಾಪಸ್ ಆಗಿದ್ದವರಿಗೆ ಕೊರೊನಾ ಸೋಂಕು ದೃಢವಾಗಿತ್ತು. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 18 ಕ್ಕೂ ಅಧಿಕ ಜನರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಗಂಟಲು ದ್ರವ ಸಂಗ್ರಹಿಸಲು ತೆರಳಿದ್ದ ವೈದ್ಯಕೀಯ ಸಿಬ್ಬಂದಿಗೆ ವಿರೋಧ ವ್ಯಕ್ತಪಡಿಸುವ ಜತೆಗೆ ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಮೇಲೆ ಶಂಕಿತರು ಹಲ್ಲೆ ನಡೆಸಿದ್ದರು.
ಈ ಪ್ರಕರಣ ಸಂಬಂಧ ಪಿಡಿಒ ಪ್ರಶಾಂತ್ ಮುನವಳ್ಳಿ ಕಾಕತಿ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ಸಂಬಂಧ ಓರ್ವನನ್ನು ಬಂಧಿಸಿರುವ ಪೊಲೀಸರು ಪರಾರಿಯಾದವರಿಗೆ ಶೋಧ ಕಾರ್ಯ ಮುಂದುವರೆಸಿದ್ದಾರೆ.