ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೊರೊನಾ ತಗುಲಿದ್ದು, ಗೋಕಾಕಿನ ಸರ್ಕಾರಿ ಆಸ್ಪತ್ರೆಯ ಐಸಿಯುಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಮಾಹಿತಿ ನೀಡಿರುವ ಗೋಕಾಕ ತಾಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ರವೀಂದ್ರ ಅಂಟಿನ್, ಹೊರರಾಜ್ಯದ ಪ್ರವಾಸದಲ್ಲಿದ್ದ ರಮೇಶ್ ಜಾರಕಿಹೊಳಿ ಗುರುವಾರ ರಾತ್ರಿ ಗೋಕಾಕಿಗೆ ಬಂದಿದ್ದರು. ನಂತರ ಅವರಲ್ಲಿ ಕೋವಿಡ್ ಲಕ್ಷಣಗಳು ಕಂಡುಬಂದಿದ್ದವು. ನಿನ್ನೆ ರಾತ್ರಿ ಅವರು ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಅದರ ವರದಿ ಬಂದಿದ್ದು, ಸೋಂಕು ದೃಢಪಟ್ಟಿದೆ. ರಮೇಶ್ ಜಾರಕಿಹೊಳಿ ಅವರಿಗೆ ರಕ್ತದೊತ್ತಡ ಹಾಗೂ ಮಧುಮೇಹ ಇರುವ ಕಾರಣ ಐಸಿಯುಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಅವರು ಇನ್ನೂ ಮೂರು-ನಾಲ್ಕು ದಿನ ಐಸಿಯುನಲ್ಲಿ ಇರಬೇಕಾಗುತ್ತೆ. ಅವರು ಮಹಾರಾಷ್ಟ್ರ ಹಾಗೂ ಬೆಂಗಳೂರಿಗೆ ಹೋಗಿ ಬಂದಿರುವ ಮಾಹಿತಿ ಲಭ್ಯವಾಗಿದೆ. ಕೋವಿಡ್ ವಾರ್ಡ್ನ ಐಸಿಯುನಲ್ಲಿರುವ ರಮೇಶ್ ಜಾರಕಿಹೊಳಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಿಡಿ ಪ್ರಕರಣದ ಯುವತಿ ಮಾರ್ಚ್ 30 ರಂದು ಕೋರ್ಟ್ಗೆ ಹಾಜರಾದ ಹಿನ್ನೆಲೆಯಲ್ಲಿ ಅವರು ಕೊಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ತೆರಳಿದ್ದರು. ಬಳಿಕ ಅಲ್ಲಿಂದ ಎಲ್ಲಿಗೆ ಹೋಗಿದ್ದರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಕೊರೊನಾ ಬಂದಿದೆ: ಸಚಿವ ಭೈರತಿ ಬಸವರಾಜ
ಮತ್ತಿಬ್ಬರಿಗೆ ಸೋಂಕು
ಶಾಸಕ ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಅವರ ಸಂಪರ್ಕದಲ್ಲಿದ್ದ ಮತ್ತಿಬ್ಬರಿಗೆ ಸೋಂಕು ದೃಢಪಟ್ಟಿದೆ. ರಮೇಶ್ ಜಾರಕಿಹೊಳಿ ಕಾರು ಚಾಲಕ, ಅಡುಗೆ ಭಟ್ಟನಿಗೂ ಕೊರೊನಾ ಪಾಸಿಟವ್ ಬಂದಿದೆ. ಇಬ್ಬರು ಹೋಮ್ ಐಸೋಲೇಷನ್ನಲ್ಲಿದ್ದಾರೆ ಎಂಬ ಮಾಹಿತಿ ದೊರೆತಿದೆ.