ಅಥಣಿ: ಕಳೆದೊಂದು ತಿಂಗಳಿಂದ ಕೊರೊನಾ ಸೋಂಕು ಉಲ್ಬಣದಿಂದ ಜಿಲ್ಲೆಯಲ್ಲಿ ಆತಂಕ ಹೆಚ್ಚಾಗಿತ್ತು. ಸದ್ಯ ಜಿಲ್ಲೆಯಲ್ಲಿ ಸೋಂಕು ಪ್ರಮಾಣ ತಗ್ಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಹೇಳಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹಾಗೂ ಅಥಣಿ ತಾಲೂಕಿನಲ್ಲಿ ಕೊರೊನಾ ಸೋಂಕು ತಗ್ಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ 135 ಊರುಗಳಲ್ಲಿ ರ್ಯಾಪಿಡ್ ಟೆಸ್ಟ್ ನಡೆಸಲಾಗುತ್ತಿದೆ. ಲಕ್ಷಣಗಳು ಕಂಡು ಬಂದರೆ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಲಾಗುವುದು. ಸದ್ಯ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
ಅಥಣಿ ತಾಲೂಕಿನಲ್ಲಿ ವ್ಯಾಕ್ಸಿನ್ ನೀಡುವುದಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೊರೊನಾ ಕೇರ್ ಸೆಂಟರ್‌ಗಳಲ್ಲಿ ಒಳ್ಳೆಯ ಚಿಕಿತ್ಸೆ ನೀಡಲಾಗುತ್ತಿದೆ. ಜನರು ಭಯ ಪಡದೆ ಕೊರೊನಾ ಲಕ್ಷಣ ಇದ್ದವರು ಟೆಸ್ಟ್ ಮಾಡಿಸಿಕಿಕೊಳ್ಳುವಂತೆ ಮನವಿ ಮಾಡಿದರು. ಸರ್ಕಾರ ಘೋಷಿಸಿದ ಲಾಕ್‌ಡೌನ್ ಜಿಲ್ಲೆಯಲ್ಲಿ ಜೂನ್ 7 ವರೆಗೆ ಮುಂದುವರಿಯುವುದು. ಹೋಬಳಿ ಮಟ್ಟದಲ್ಲಿ ಕೊರೊನಾ ಸೆಂಟರ್ ತೆರೆಯುತ್ತೇವೆ. ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಸಕಲ ರೀತಿಯಲ್ಲೂ ಸಿದ್ಧಗೊಂಡಿದೆ ಎಂದು ತಿಳಿಸಿದರು.