ಬೆಳಗಾವಿ: ಕೊರೊನಾ ಸೋಂಕಿತನ 3 ಕೋವಿಡ್ ವರದಿಗಳೇ ಮಂಗಮಾಯ ಆಗಿರುವ ಆರೋಪ ಪ್ರಕರಣ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತನಿಂದ ಮೂರು ಬಾರಿ ಗಂಟಲು ದ್ರವ ತೆಗೆದುಕೊಂಡು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಇದೀಗ ಆ ವರದಿಗಳೇ ಕಾಣೆಯಾಗಿವೆ ಎನ್ನಲಾಗ್ತಿದೆ. ಹೀಗಾಗಿ ಸೋಂಕಿತ ಭಯಭೀತನಾಗಿದ್ದಲ್ಲದೆ, ಈ ಘಟನೆ ಇತರ ರೋಗಿಗಳನ್ನು ಸಹ ಆತಂಕಕ್ಕೆ ದೂಡಿದೆ.
ನಿಮ್ಮ ರಿಪೋರ್ಟ್ ಮಿಸ್ ಆಗಿದೆ ಎಂದು ಕಾರಣ ನೀಡಿ ಇಲ್ಲಿನ ಬಿಮ್ಸ್ ಸಿಬ್ಬಂದಿ ಒಬ್ಬ ರೋಗಿಯಿಂದಲೇ ಮೂರು ಸಲ ಗಂಟಲು ದ್ರವ ಪಡೆದಿದ್ದಾರೆ. ಪದೇ ಪದೇ ಗಂಟಲು ದ್ರವ ನೀಡುತ್ತಿರುವ ರೋಗಿ ನರಕಯಾತನೆ ಅನುಭವಿಸುವಂತಾಗಿದೆ.
ಈ ರೋಗಿ ಕಳೆದ 8 ದಿನಗಳ ಹಿಂದೆ ಕೋವಿಡ್ ವಾರ್ಡ್ಗೆ ದಾಖಲಾಗಿದ್ದ. ಸರಿಯಾಗಿ ಉಪಚಾರ ಮಾಡದೇ, ರಿಪೋರ್ಟ್ ನೀಡದ ಬಿಮ್ಸ್ ವಿರುದ್ಧ ಸೋಂಕಿತ ವಿಡಿಯೋ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾನೆ.