ಬೈಲಹೊಂಗಲ(ಬೆಳಗಾವಿ): ಕೊರೊನಾ ವೈರಸ್ನಿಂದಾಗಿ ತಿನ್ನಲು ಅನ್ನವಿಲ್ಲದೆ, ಉದ್ಯೋಗವಿಲ್ಲದೆ ಪರದಾಡುತ್ತಿರುವ ಸಮಯದಲ್ಲಿ ದಿನಸಿ ವ್ಯಾಪಾರಿಗಳು ಮಾತ್ರ ದಿನಸಿ ಪದಾರ್ಥಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ದಿನ ಬಳಕೆಯ ಪದಾರ್ಥಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇವರನ್ನು ಕೇಳುವವರು, ಹೇಳುವವರು ಯಾರೂ ಇಲ್ಲದಂತಾಗಿದೆ. 1 ಕೆಜಿ ಹೆಸರು ಕಾಳಿಗೆ ಮೊದಲು 60ರಿಂದ 70 ರೂ. ಇತ್ತು. ಆದರೀಗ 120 ರೂ. ಆಗಿದೆ. ಹೀಗೆ ಅಕ್ಕಿ, ಬೇಳೆ, ಅಡುಗೆ ಎಣ್ಣೆ ಸೇರಿದಂತೆ ದಿನಸಿ ಪದಾರ್ಥಗಳನ್ನು ದುಪ್ಪಟ್ಟು ಬೆಲೆಗೆ ವ್ಯಾಪರಿಗಳು ಮಾರಿಕೊಳ್ಳುತ್ತಿದ್ದಾರೆ.
ತಾಲೂಕಿನಲ್ಲಿ ದಿನಸಿ ವಸ್ತುಗಳನ್ನು ತೆಗೆದುಕೊಳ್ಳಲು ಕಡಿಮೆ ಅವಧಿ ನಿಗದಿ ಮಾಡಿರುವುದರಿಂದ ದಿನಸಿ ಪದಾರ್ಥಗಳು ಸಿಕ್ಕಿದ್ದೇ ನಮ್ಮ ಭಾಗ್ಯ ಎಂಬಂತೆ ವ್ಯಾಪಾರಿಗಳು ಹೇಳುವ ಬೆಲೆಗೆ ಯಾರೂ ಪ್ರಶ್ನಿಸದೆ ಖರೀದಿಸುತ್ತಿದ್ದಾರೆ. ಒಂದು ವೇಳೆ ಪ್ರಶ್ನಿಸಿದರೆ ಬೆಲೆ ಏರಿಕೆಯಾಗಿ ತಿಂಗಳುಗಳೇ ಕಳೆದಿವೆ ಎನ್ನುತ್ತಾರೆ. ಇದರಿಂದಾಗಿ ಕೂಲಿ ವಂಚಿತ ಬಡವರು, ಕಾರ್ಮಿಕರು, ರೈತರು ತೊಂದರೆ ಅನುಭವಿಸುವಂತಾಗಿದೆ.
ಹಾಗಾಗಿ ಸಂಬಂಧಿಸಿದ ಅಧಿಕಾರಿಗಳು ಇನ್ನಾದರೂ ಸೂಕ್ತ ಕ್ರಮ ಜರುಗಿಸುವ ಮೂಲಕ ನಿಯಮ ಉಲ್ಲಂಘಿಸುವ ವ್ಯಾಪಾರಿಗಳ ಪರವಾನಗಿ ರದ್ದು ಮಾಡುವ ಎಚ್ಚರಿಕೆ ನೀಡಬೇಕಿದೆ ಎನ್ನುತ್ತಾರೆ ಸಾರ್ವಜನಿಕರು.