ಬೆಳಗಾವಿ: ಏಡ್ಸ್ ಸೋಂಕಿತ ಮಹಿಳೆಯರ ವಾಸ್ತವ್ಯಕ್ಕೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ಪ್ರತ್ಯೇಕ ಮನೆ ನಿರ್ಮಿಸಲಾಗಿದೆ. ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರ ಅನುದಾನದಡಿ ಈ ಕಟ್ಟಡ ನಿರ್ಮಾಣ ಮಾಡಲಾಗಿದೆ.
ಕಟ್ಟಡ ಉದ್ಘಾಟಿಸಿ ಮಾತನಾಡಿದ ಸತೀಶ್ ಜಾರಕಿಹೊಳಿ, ಸಮಾಜದ ಜೊತೆಗೆ ಕುಟುಂಬಸ್ಥರು ಕೂಡ ಏಡ್ಸ್ ಸೋಂಕಿತರನ್ನು ಕೀಳಾಗಿ ಕಾಣುವ ಪ್ರವೃತ್ತಿ ಹೆಚ್ಚುತ್ತಿರುವುದು ಕಳವಳ ಮೂಡಿಸಿದೆ. ಈ ನೂತನ ಕಟ್ಟಡ ಏಡ್ಸ್ ಸೋಂಕಿತ ಮಹಿಳೆಯರು ಒಂದೆಡೆ ಸೇರಿ ತಮ್ಮ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಇಲ್ಲಿ ಉಳಿದುಕೊಳ್ಳಲು ಅನುಕೂಲವಾಗಲಿದೆ. ಇದನ್ನು ಸರಿಯಾಗಿ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಛತ್ತಿಸಗಢದಲ್ಲಿ 15 ವರ್ಷದಲ್ಲಿ ಹನ್ನೊಂದು ಸಾವಿರ ಮಹಿಳೆಯರು, ಹೆಣ್ಣು ಮಕ್ಕಳು ಕಾಣೆಯಾಗಿದ್ದಾರೆ. ಜಾರ್ಖಂಡ್‌ದಲ್ಲಿ ಕೂಡ ಇದೇ ಪರಿಸ್ಥಿತಿ ಇದೆ. ಆದ್ದರಿಂದ ಮಹಿಳೆಯರು ಈಗಿನ ಪರಿಸ್ಥಿತಿಯಲ್ಲಿ ಜಾಗ್ರತೆಯಿಂದ ಬದುಕುವ ಅವಶ್ಯಕತೆ ಇದೆ. ಸಾವಿತ್ರಿಬಾಯಿ ಫುಲೆಯವರು ಮಹಾರಾಷ್ಟ್ರದ ಪುಣೆಯಲ್ಲಿ ಮಹಿಳೆಯರಿಗೆ ಶಿಕ್ಷಣ ನೀಡಬೇಕು ಎಂದು ನಿರ್ಧಾರ ಮಾಡಿದಾಗ, ಅವರ ವಿರುದ್ಧ ಇಲ್ಲ ಸಲ್ಲದ ಆರೋಪಗಳು ಕೇಳಿ ಬಂದವು. ಆ ಆರೋಪ, ದಬ್ಬಾಳಿಕೆಗೆ ಹೆದರದೆ ಅವರು ಮಹಿಳೆಯರಿಗೆ ಶಿಕ್ಷಣ ನೀಡಿ ಸಮಾಜಕ್ಕೆ ಆದರ್ಶವಾದರು ಎಂದರು.
ಇದನ್ನೂ ಓದಿ: ದೇಗುಲ ಬಂದ್ ಆದರೂ ಸವದತ್ತಿಯ ಶ್ರೀ ಯಲ್ಲಮ್ಮನ ಗುಡ್ಡಕ್ಕೆ ಹರಿದು ಬರುತ್ತಿದೆ ಭಕ್ತಸಾಗರ!