ಬೆಳಗಾವಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅನರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಂಡ ವಿಚಾರದ ಹಿನ್ನೆಲೆ ಮೌನ ಪ್ರತಿಭಟನೆಗೆ ಅಖಿಲ ಭಾರತೀಯ ಕಾಂಗ್ರೆಸ್ ಕರೆ ನೀಡಿತ್ತು. ಇಂದು ಬುಧವಾರ ಬೆಳಗಾವಿಯ ಕಾಂಗ್ರೆಸ್ ಭವನದ ಮುಂಭಾಗದಲ್ಲಿ ಜಿಲ್ಲೆಯ ಕೈ ಕಾರ್ಯಕರ್ತರು ಧರಣಿ ನಡೆಸಿದರು. ಈ ವೇಳೆ ಎಂಎಲ್ಸಿ ಬಿ.ಕೆ. ಹರಿಪ್ರಸಾದ್ ಸಾಥ್ ನೀಡಿದರು.
ರಾಹುಲ್ ಗಾಂಧಿಯವರ ಸತ್ಯದ ನಡಿಗೆಯಲ್ಲಿ ನಮ್ಮ ಹೆಜ್ಜೆ, ಸರ್ವಾಧಿಕಾರಿ ಧೋರಣೆಯ ಮೋದಿಯವರಿಗೆ ಧಿಕ್ಕಾರ, ನಮ್ಮ ಹೆಜ್ಜೆ ಜನತಾ ನ್ಯಾಯಾಲಯದತ್ತ ಎಂಬ ಬರಹದ ಫಲಕಗಳನ್ನು ಹಿಡಿದು ಬೆಳಗ್ಗೆ 10ಗಂಟೆಯಿಂದ 5ಗಂಟೆವರೆಗೆ ಮೌನವಾಗಿ ಪ್ರತಿಭಟನೆ ನಡೆಸಿದರು.
ಎಂಎಲ್ಸಿ ಬಿ.ಕೆ. ಹರಿಪ್ರಸಾದ್ ಮಾತನಾಡಿ, ''ಕೇಂದ್ರ ಸರ್ಕಾರದ ಸೇಡಿನ ಮನೋಭಾವದಿಂದ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿರುವುದು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ದೃಢಪಡಿಸಲು, ಅದಕ್ಕೆ ಬೆಂಬಲಿಸಲು ನಾವೆಲ್ಲಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇವೆ'' ಎಂದರು.
ಎಂಎಲ್ಸಿ ಬಿ.ಕೆ. ಹರಿಪ್ರಸಾದ್ ಗರಂ: ಕಾಂಗ್ರೆಸ್ ಸರ್ಕಾರ ಬಂದಾಗ ಕೊಲೆ, ಗಲಾಟೆಗಳು ಜಾಸ್ತಿಯಾಗುತ್ತವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ''ಮಂಗಳೂರು, ಬೆಂಗಳೂರು ಸೇರಿ ರಾಜ್ಯದ ಅನೇಕ ಜೈಲುಗಳಲ್ಲಿ ಬಹಳಷ್ಟು ಅಪರಾಧಿಗಳಿದ್ದಾರೆ. ಅವರೆಲ್ಲಾ ಕಾಂಗ್ರೆಸ್ ಬಂದ ಮೇಲೆ ಜೈಲಲ್ಲಿದ್ದಾರಾ ಎಂದು ಕಟೀಲ ಮೊದಲು ಹೇಳಲಿ. ಅಪರಾಧ ಚಟುವಟಿಕೆ ಮಾಡಿದವರು ಜೈಲಲ್ಲಿ ಇರುತ್ತಾರೆ. ಅದಕ್ಕೆಲ್ಲಾ ಕಾಂಗ್ರೆಸ್ ಹೊಣೆಯಲ್ಲ. ಪ್ರಸ್ತುತ ಹಾದಿ ಬೀದಿಯಲ್ಲಿ ಕೊಚ್ಚಿ ಕೊಲೆ ಮಾಡುವುದು ನಿಂತಿದೆ. ನೈತಿಕ ಪೊಲೀಸ್ ಗಿರಿ ಮಾಡುವವರು ಈ ರೀತಿ ಆಪಾದನೆ ಮಾಡುತ್ತಾರೆ'' ಎಂದರು.
''ಕಾಂಗ್ರೆಸ್ ಸರ್ಕಾರ ಬಂದ ನಂತರ ನೈತಿಕ ಪೊಲೀಸ್ ಗಿರಿ ಮಾಡಲು ರಾಜ್ಯದಲ್ಲಿ ಎಲ್ಲಿಯೂ ಅವಕಾಶ ಕೊಡುತ್ತಿಲ್ಲ. ಇದರಿಂದ ಅವರಿಗೆ ಉಸಿರು ಕಟ್ಟಿದ ಹಾಗೆ ಆಗಿದೆ. ಅದಕ್ಕೆ ಕಟೀಲು ಅವರು ಈ ರೀತಿ ಪಿಟೀಲು ಬಾರಿಸುತ್ತಿದ್ದಾರೆ'' ಎಂದು ಹರಿಪ್ರಸಾದ ವ್ಯಂಗ್ಯವಾಡಿದರು.
ಬಿಜೆಪಿ ನಾಯಕರ ವಿರುದ್ಧ ಕಿಡಿ: ರಾಜ್ಯದ ಅಭಿವೃದ್ಧಿಗೆ ಸಿದ್ದರಾಮಯ್ಯ ಅವರ ಬಜೆಟ್ ಪೂರಕ ಆಗಿಲ್ಲ ಎಂಬ ಮಾಜಿ ಸಚಿವ ಮುರುಗೇಶ ನಿರಾಣಿ ಟೀಕೆಗೆ ಪ್ರತಿಕ್ರಿಯಿಸಿದ ಅವರು, ''2018ರಲ್ಲಿ ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟಾಗ 54 ಲಕ್ಷ ಕೋಟಿ ಸಾಲವಿತ್ತು. ಅದಾದ ಬಳಿಕ ಬೊಮ್ಮಾಯಿ ಅವರು ಎಷ್ಟು ಸಾಲ ಮಾಡಿದ್ದಾರೆ ಎಂಬುದನ್ನು ಅವರು ಬಹಿರಂಗ ಪಡಿಸಲಿ. ನಾವು ಅಭಿವೃದ್ಧಿ ಕೆಲಸಕ್ಕಾಗಿ ಸಾಲ ಮಾಡಿದ್ದೇವೆ. ಈಗ ಅವರು ಚುನಾವಣೆಯಲ್ಲಿ ಸೋತಿದ್ದಾರೆ. ಹಾಗಾಗಿ ಟೀಕಿಸುತ್ತಿದ್ದಾರೆ'' ಎಂದು ಕಿಡಿಕಾರಿದರು.
ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಮತ್ತು ಮುಖಂಡೆ ಆಯಿಷಾ ಸನದಿ ಮಾತನಾಡಿ, ''ರಾಹುಲ್ ಗಾಂಧಿಯವರ ಜನಪ್ರಿಯತೆ ಸಹಿಸಿಕೊಳ್ಳದೇ, ಅವರ ಧ್ವನಿ ಹತ್ತಿಕ್ಕುವ ಕೆಲಸ ಬಿಜೆಪಿ ಮಾಡುತ್ತಿದೆ. ಆದರೆ, ಇದ್ಯಾವುದಕ್ಕೂ ರಾಹುಲ್ ಅವರು ಹೆದರುವ ಪ್ರಶ್ನೆಯೇ ಇಲ್ಲ. ನಾವು ಅವರ ಜೊತೆ ಇದ್ದೇವೆ'' ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಪ್ರದೀಪ ಎಂ.ಜೆ, ಮೋಹನ ರೆಡ್ಡಿ, ಬಸವರಾಜ ಶೇಗಾವಿ, ಶೇಖರ ಇಟಿ, ಆಯಿಷಾ ಸನದಿ, ಕಲ್ಪನಾ ಜೋಶಿ, ಜಗದೀಶ ಸಾವಂತ ರೋಹಿಣಿ ಬಾಬಸೇಟ್, ರೇಖಾ ಇಂಡಿಕರ್, ಶ್ರೀಕಾಂತ ನೇಗಿನಹಾಳ, ಎ.ಎಮ್. ಲೋದಿ ಹಾಗೂ ಇನ್ನಿತರರು ಇದ್ದರು.
ಇದನ್ನೂ ಓದಿ: ಅನುದಾನಿತ ಶಾಲೆಗಳ ಫಲಿತಾಂಶ ಇಳಿಕೆ ಗಂಭೀರವಾಗಿ ಪರಿಗಣನೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ