ಚಿಕ್ಕೋಡಿ: ರೈತರ ವಿಚಾರದಲ್ಲಿ ನಮಗೆ ಗೌರವ ಇದೆ. ರೈತರು ಯಾರೂ ಇಂತಹ ಗಲಾಟೆ ಮಾಡಿಲ್ಲ. ನಿನ್ನೆಯ ಘಟನೆಯಲ್ಲಿ ಕಾಂಗ್ರೆಸ್ನ ಕೆಲ ನಾಯಕರು ರೈತರಾಗಿ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ಸಿಗರಿಗೆ ಇವತ್ತು ರೈತರು ನೆನಪಾಗುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.
ನಿಪ್ಪಾಣಿ ತಾಲೂಕಿನ ಹಂಚನಾಳ ಗ್ರಾಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ನೂತನ ಶಾಲಾ ಕಟ್ಟಡ ಉದ್ಘಾಟಿಸಿದ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ರೈತರಿಗೆ ಅನೂಕೂಲ ಆಗಲಿ ಎಂದು ಕಾನೂನು ಮಾಡಲಾಗಿದೆ. ಅದನ್ನು ಕೂತು ಮಾತನಾಡಿಕೊಳ್ಳಬೇಕು. ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಕಾಂಗ್ರೆಸ್ ರೈತರನ್ನು ಪ್ರಚೋದಿಸುತ್ತಿದೆ ಎಂದು ಆರೋಪಿಸಿದರು.
ಐದು ರಾಜ್ಯಗಳ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಈ ರೀತಿ ರೈತರನ್ನು ಪ್ರಚೋದಿಸುತ್ತಿದ್ದು, ಚುನಾವಣೆಯಲ್ಲಿ ಗೆಲುವು ಸಾಧಿಸಲು ಈ ರೀತಿ ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಪಿಸಿದರು.
ಡಿ.ಕೆ.ಶಿವಕುಮಾರ್ ಒಂದು ದಿನವೂ ದೆಹಲಿಗೆ ಹೋಗಿಲ್ಲ. ರೈತರ ಹೋರಾಟ ನೋಡಿಲ್ಲ. ಆದರೆ ಇಂದು ರೈತರ ಪರ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಹತಾಶರಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದರು.
ಓದಿ: ಮತ್ತೆ ಬಿಎಸ್ವೈ ವಿರುದ್ಧ ತಿರುಗಿಬಿದ್ದ ಯತ್ನಾಳ್.. ಯುಗಾದಿ ವೇಳೆಗೆ ಬದಲಾಗ್ತಾರಾ ಸಿಎಂ..?
ಕಾಂಗ್ರೆಸ್ ನಾಯಕರು ನಿರುದ್ಯೋಗಿಗಳಾಗಿದ್ದಾರೆ. ಹತಾಶೆಯಿಂದ ರೈತರಂತೆ ಬಿಂಬಿಸಿಕೊಂಡು, ಪ್ರಚೋದನೆ ಮಾಡುತ್ತಿದ್ದಾರೆ. ನಿನ್ನೆ ನಡೆದ ದೆಹಲಿ ರೈತರ ಗಲಾಟೆ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ ನಂತರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಹೀಗಾಗಿ ಕಾಂಗ್ರೆಸ್, ರೈತರ ಹೆಸರು ಹೇಳಿಕೊಂಡು ಷಡ್ಯಂತ್ರ ನಡೆಸುತ್ತಿದೆ ಎಂದು ದೂರಿದರು.