ಬೆಳಗಾವಿ: ನಗರದ ಸಮರ್ಥ ಕಾಲೋನಿಯಲ್ಲಿರುವ ಗುತ್ತಿಗೆದಾರ ಸಂತೋಷ ಪಾಟೀಲ ಅವರ ಮನೆಗೆ ಕಾಂಗ್ರೆಸ್ ನಾಯಕರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ವಿಪಕ್ಷ ನಾಯಕ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಸಲೀಂ ಅಹ್ಮದ್, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿದ್ದರು.
ಸಂತೋಷ ಪಾಟೀಲ್ ಪತ್ನಿ ಜಯಶ್ರೀ ಹಾಗೂ ಕುಟುಂಬಸ್ಥರಿಗೆ ಕಾಂಗ್ರೆಸ್ನ ಮುಖಂಡರು ಧೈರ್ಯ ತುಂಬಿದ್ದಾರೆ. ಈ ವೇಳೆ ಕಾಂಗ್ರೆಸ್ ನಾಯಕರ ಮುಂದೆ ಸಂತೋಷ ಕುಟುಂಬಸ್ಥರು ಕಣ್ಣೀರು ಹಾಕಿದ್ದಲ್ಲದೇ 40% ಕಮಿಷನ್ ವಿಚಾರವನ್ನೂ ಉಲ್ಲೇಖಿಸಿದ್ದಾರೆ. 40% ಕಮಿಷನ್ ಕೊಡದೇ ಇದ್ದರೆ ಯಾರ ಕಡೆಯಿಂದ ಬಿಲ್ ಮಾಡಿಸಿಕೊಳ್ತಿಯಾ ಮಾಡಿಸಿಕೋ ಅಂತಾ ಸಂತೋಷನಿಗೆ ಹೇಳುತ್ತಿದ್ದರಂತೆ. ಈ ವೇಳೆ ಈಶ್ವರಪ್ಪ ಹತ್ತಿರ ಕರೆದುಕೊಂಡು ಹೋಗಿದ್ದು ಯಾರು ಎಂಬ ಪ್ರಶ್ನೆಯನ್ನು ವಿಪಕ್ಷ ನಾಯಕ ಕೇಳಿದಾಗ, ಹಿಂಡಲಗಾ ಗ್ರಾಮ ಪಂಚಾಯತಿ ಅಧ್ಯಕ್ಷ ಕರೆದುಕೊಂಡು ಹೋಗಿದ್ರು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ರು. ಈ ಮಾತಿನ ಮಧ್ಯೆ ಡಿಕೆಶಿ ಮಾತನಾಡಿ, ನೋಡಮ್ಮಾ.. ನಿನಗೆ ನ್ಯಾಯ ಕೊಡಿಸೋಕೆ ಬಂದಿದ್ದೇವೆ, ನೀನು ಧೈರ್ಯದಿಂದ ಇರು ಎಂದರು.
ರಾಜಕಾರಣ ಮಾಡಲು ಬಂದಿಲ್ಲ: ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಾವು ರಾಜಕಾರಣ ಮಾಡಲು ಬಂದಿಲ್ಲ, ಜವಾಬ್ದಾರಿ ಪಕ್ಷವಾಗಿ ಅಮಾನವೀಯ ಸಾವಿಗೆ ನ್ಯಾಯ ಕೊಡಿಸಲು ಬಂದಿದ್ದೇನೆ ಎಂದು ಹೇಳಿದರು. ಸಾವಿಗೆ ಕಾರಣ ಈಶ್ವರಪ್ಪ ಅಂತ ನೇರವಾಗಿ ಅವರ ಕುಟುಂಬಸ್ಥರು ಹೇಳಿದ್ದಾರೆ. ಈಗ ತಾಯಿ-ಹೆಂಡತಿ ಇಬ್ಬರು ಅದೇ ಮಾತನ್ನು ಹೇಳಿದ್ದಾರೆ.ಅವರಿಗೆ ಶಿಕ್ಷೆ ಆಗಬೇಕು ಅಂತಾ ಹೇಳಿದ್ದಾರೆ, ನಾವು ನ್ಯಾಯವನ್ನು ಕೊಡಿಸಲು ಬಂದಿದ್ದೇವೆ ಎಂದು ತಿಳಿಸಿದರು.
ಸಂತೋಷನ ಹೆಂಡತಿಗೆ ಕೆಲಸ: ಕಾಂಗ್ರೆಸ್ ಸಂತೋಷ ಮಾಡಿದ 4 ಕೋಟಿ ರೂ ಕಾಮಗಾರಿ ಕೆಲಸದ ಬಿಲ್ ಬಿಡುಗಡೆ ಆಗಬೇಕು. ಯಾವುದೇ ಸಾವಿಗೆ ಬೆಲೆ ಕಟ್ಟಲು ಆಗಲ್ಲ. ಆದರೆ, ಸರ್ಕಾರ ಕೂಡಲೇ ಒಂದು ಕೋಟಿ ಪರಿಹಾರ ಕೊಡಬೇಕು. ಮಾನವೀಯ ದೃಷ್ಟಿಯಿಂದ ಸಂತೋಷನ ಹೆಂಡತಿಗೆ ಕಾಂಗ್ರೆಸ್ ಪಕ್ಷದಿಂದ ಕೆಲಸ ಕೊಡುತ್ತೇವೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಎಲ್ಲ ವಿಚಾರಗಳನ್ನು ತಾಯಿ ಮತ್ತು ಸಂತೋಷ ಹೆಂಡತಿ ಹೇಳಿದ್ದಾರೆ. ಸಾವಿಗೆ ಕಾರಣ ಏಕೆ ಅಂತಾ ಹೇಳಿದ್ದಾರೆ. ಸಂತೋಷ ಮಾಡಿರೋ ಕೆಲಸವನ್ನು ಪರಿಶೀಲನೆ ನಡೆಸಿ, ಬಿಲ್ ಮಂಜೂರು ಮಾಡಬೇಕು ಅಂತಾ ಡಿಕೆಶಿ ಒತ್ತಾಯಿಸಿದರು.
ಬಿಜೆಪಿಯರು ಇಷ್ಟೊಂದು ನಿರ್ದಯಿಗಳಾ: ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಮಾತನಾಡಿ, ಕರ್ನಾಟಕದಲ್ಲಿ ಬಿಜೆಪಿಯಿಂದ ಅವರದೇ ಕಾರ್ಯಕರ್ತರು ಲೂಟಿ ನಡೆದಿದ್ದು ಭ್ರಷ್ಟಾಚಾರ ಕೂಪದಲ್ಲಿ ಬೊಮ್ಮಾಯಿ ಸರ್ಕಾರ ಮುಳುಗಿದೆ. ಆತ್ಮಹತ್ಯೆಗೆ ಪ್ರಚೋದಿಸಿದ್ದು ಕೆ.ಎಸ್. ಈಶ್ವರಪ್ಪನವರು. ಇಷ್ಟೆಲ್ಲಾ ಆದ ಬಳಿಕ ಬೊಮ್ಮಾಯಿ ಸರ್ಕಾರ ಈಶ್ವರಪ್ಪ ಜತೆಗೆ ನಿಂತುಕೊಂಡಿದೆ. ಇದರರ್ಥ ಈಶ್ವರಪ್ಪ ಅಷ್ಟೇ ಅಲ್ಲಾ ಸಿಎಂ ಬೊಮ್ಮಾಯಿ ಕೂಡ ಶಾಮೀಲಾಗಿದ್ದಾರೆ ಎಂದು ಆರೋಪ ಮಾಡಿದ್ರು.
ಅರುಣ್ ಸಿಂಗ್ ವಿರುದ್ಧ ಕಿಡಿಕಾರಿದ ಸುರ್ಜೇವಾಲಾ, ಸಿಂಗ್ ಅವರೇ ನೀವು ಇಷ್ಟು ನಿರ್ದಯಿ ಆಗಿ ಹೋದ್ರಾ...ಒಬ್ಬ ಅಮಾಯಕ ವಿಧವೆಯ ಕಣ್ಣೀರು ಕಾಣಿಸುವುದಿಲ್ವಾ..ನಿಮ್ಮ ಪರಿವಾರದಲ್ಲಿ ದುಃಖವನ್ನ ಯಾವತ್ತು ನೋಡೇ ಇಲ್ವಾ... ನಿಮಗೆ ನಾಚಿಕೆಯಾಗಬೇಕು, ಎಲ್ಲಿಯಾದ್ರೂ ಮುಳುಗಿ ಸಾಯಿರಿ ಎಂದು ಆಕ್ರೋಶ ಹೊರಹಾಕಿದ್ದಾರೆ.