ಬೆಳಗಾವಿ: ಸೆ.3ರಂದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಉಸ್ತುವಾರಿ ಎಂಬಿ ಪಾಟೀಲ್ರವರ ನೇತೃತ್ವದಲ್ಲಿ ನಗರದ ಕಾಂಗ್ರೆಸ್ ಭವನದಲ್ಲಿ ಮಹತ್ವದ ಸಭೆ ನಡೆಯಿತು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಚಿಹ್ನೆ ಮೇಲೆ ಚುನಾವಣೆ ಬಗ್ಗೆ ಸಭೆಯಲ್ಲಿ ಎಲ್ಲಾ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹ ಮಾಡಿದ್ದೇವೆ. ಈ ಅಭಿಪ್ರಾಯವನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಮುಂದಿಡುತ್ತೇವೆ. ವರಿಷ್ಠರ ನಿರ್ದೇಶನ ಪ್ರಕಾರ ಮುಂದಿನ ನಿರ್ಣಯ ಆಗುತ್ತದೆ. ವಿವಿಧ ಅಭಿಪ್ರಾಯ ಬಂದಿದ್ದು ಪಕ್ಷದ ನಿರ್ದೇಶನದ ಮೇಲೆ ನಿರ್ಧಾರವಾಗಲಿದೆ. ಚಿಹ್ನೆ ಮೇಲೆ ಸ್ಪರ್ಧೆಗೆ ಪರ-ವಿರೋಧ ಎರಡು ಅಭಿಪ್ರಾಯಗಳು ವ್ಯಕ್ತವಾಗಿವೆ ಎಂದರು.
ಈಗ 120 ಜನರು ಚುನಾವಣೆಗೆ ಅಪ್ಲಿಕೇಷನ್ ಹಾಕಿದ್ದಾರೆ. ನಾವು ಯಾವ ನಿರ್ಧಾರ ಮಾಡಿದರೂ ಜಿಲ್ಲೆ ಹಾಗೂ ರಾಜ್ಯಕ್ಕೆ ಒಳ್ಳೆಯದಾಗಬೇಕು ಎಂದರು.
ಸಭೆಯಲ್ಲಿ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ, ನಾಸೀರ್ ಹುಸೇನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತಿತರರು ಭಾಗಿಯಾಗಿದ್ದರು.