ಅಥಣಿ : 2019ರಲ್ಲಿ ಕೃಷ್ಣಾ ನದಿಯಲ್ಲಾದ ಪ್ರವಾಹದಿಂದ ಅಥಣಿ ತಾಲೂಕಿನ ದರೂರು ಗ್ರಾಮದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ಆದೇಶ ಮಾಡಿತ್ತು. ಆದರೆ, ಜಿಲ್ಲಾಡಳಿತದ ಬೇಜವಾಬ್ದಾರಿಯಿಂದಾಗಿ ಪರಿಹಾರ ಸಿಗದೆ ಕಳೆದ ಮೂರು ವರ್ಷಗಳಿಂದ ನೆರೆ ಸಂತ್ರಸ್ತರು ಬಯಲಲ್ಲೇ ವಾಸಿಸುವಂತಾಗಿದೆ.
ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದರೂರು ಗ್ರಾಮಕ್ಕೆ ಬಂದು ನೆರೆ ಸಂತ್ರಸ್ತರಿಗೆ 5 ಲಕ್ಷ ರೂಪಾಯಿ ವೆಚ್ಚದ ಮನೆ ಮಂಜೂರಾತಿ ಪತ್ರವನ್ನು ನೀಡಿದ್ದರು.
ಆದರೆ, ಅದು ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿದೆ ಹೊರತು ನಮಗೆ ಯಾವುದೇ ಪರಿಹಾರ ಬಂದಿಲ್ಲ ಎಂದು ನೆರೆ ಸಂತ್ರಸ್ತ ಸಂಜೀವ ಕಾಂಬಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೃಷ್ಣಾ ನದಿ ಪ್ರವಾಹದಲ್ಲಿ ಬಿದ್ದಮನೆಗಳಿಗೆ 5 ಲಕ್ಷ ರೂಪಾಯಿ, ಅರ್ಧ ಹಾನಿಯಾದ ಮನೆಗಳಿಗೆ 3 ಲಕ್ಷ ರೂಪಾಯಿ, ಹಾಗೆ ಸಣ್ಣಪುಟ್ಟ ಮನೆಯ ರಿಪೇರಿಗೆ ಒಂದು ಲಕ್ಷ ರೂಪಾಯಿಯನ್ನು ಸರ್ಕಾರ ಘೋಷಣೆ ಮಾಡಿತ್ತು.
ಇದುವರೆಗೆ ನೆರೆ ಸಂತ್ರಸ್ತರಿಗೆ ಒಂದೇ ಒಂದು ರೂಪಾಯಿ ಬಂದಿಲ್ಲ. ನಾವು ಬೈಲಲ್ಲಿ ಜೀವನ ಕಳೆಯುವಂತಾಗಿದೆ. ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ಮೇಲೆ ಭರವಸೆಯನ್ನು ಕಳೆದುಕೊಂಡಿದ್ದೇವೆ ಎಂದು ಅಸಮಾಧಾನ ಹೊರ ಹಾಕಿದರು.
ಅಥಣಿ ತಾಲೂಕಿನಲ್ಲಿ 14 ಗ್ರಾಮಗಳು ಕೃಷ್ಣಾ ನದಿ ಪ್ರವಾಹದಿಂದ ಸಿಲುಕಿ ಸಂಪೂರ್ಣವಾಗಿ ನಲುಗಿದ್ದವು. ಸಾವಿರಾರು ಕುಟುಂಬಗಳು ಬೀದಿ ಪಾಲಾಗಿದ್ದು, ಇದರಲ್ಲಿ ಇನ್ನೂ ಕೆಲವರು ಬಯಲಲ್ಲಿ ವಾಸಿಸುತ್ತಿದ್ದಾರೆ. ಸರ್ಕಾರ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಿದರೂ ಜನಪ್ರತಿನಿಧಿಗಳ ಬೆಂಬಲಿಗರಿಗೆ ಮಾತ್ರ ಆ ಪರಿಹಾರ ದೊರಕಿದೆ.
ಸಮರ್ಪಕವಾಗಿ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆ ಆಗಿಲ್ಲ, ಇಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ದೇವರು ಕೊಟ್ಟರು ಪೂಜಾರಿ ಕೊಟ್ಟಿಲ್ಲ ಎಂಬಂತಾಗಿದೆ ನಮ್ಮ ಪರಿಸ್ಥಿತಿ ಎಂದು ನೆರೆ ಸಂತ್ರಸ್ತ ಅಶೋಕ್ ಕಾಂಬಳೆ ಸರ್ಕಾರದ ವಿರುದ್ಧ ಕಿಡಿಕಾರಿದರು.
ಸ್ವತಃ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಕೈಲಿಂದಲೇ ಮನೆ ಮಂಜೂರು ಪತ್ರವನ್ನು ನೀಡಿದ ನೆರೆ ಸಂತ್ರಸ್ತರಿಗೆ ಕಳೆದ ಮೂರು ವರ್ಷಗಳಿಂದ ಪರಿಹಾರ ಬರದೆ ಪರಿತಪಿಸುತ್ತಿದ್ದಾರೆ. ಸದನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದರು.