ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರೇ ತೀರ್ಮಾನಿಸಿ ಮಂಗಳಾ ಅಂಗಡಿ ಅವರಿಗೆ ಟಿಕೆಟ್ ನೀಡಿದ್ದಾರೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ತಾಲೂಕಿನ ಬಾಳೇಕುಂದ್ರಿ ಕೆ.ಹೆಚ್ ಗ್ರಾಮದಲ್ಲಿ ನಡೆದ ಬಿಜೆಪಿ ಪ್ರಚಾರಸಭೆಯಲ್ಲಿ ಮಾತನಾಡಿದ ಅವರು, ರೈಲ್ವೆ ಸಚಿವರಾಗಿ ಸುರೇಶ್ ಅಂಗಡಿಯವರು ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಕಾರ್ಯವೈಖರಿ ಹೇಗಿತ್ತು ಎಂಬುದು ತಮಗೆಲ್ಲ ಗೊತ್ತೇ ಇದೆ. ಸುರೇಶ್ ಅಂಗಡಿ ಅವರು ಕೋವಿಡ್ಗೆ ಬಲಿಯಾಗಿ ತೀರಿಕೊಂಡರು. ಹೀಗಾಗಿ, ಪ್ರಧಾನಿ ಮೋದಿ ನಿರ್ಣಯ ಮಾಡಿ ಅವರ ಶ್ರೀಮತಿಗೆ ಟಿಕೆಟ್ ನೀಡಿದ್ದಾರೆ ಎಂದು ತಿಳಿಸಿದರು.
ಕುರುಬ-ವೀರಶೈವ ಸಮುದಾಯದ ಮಧ್ಯೆ ನನಗೆ ಯಾವುದೇ ಭೇದ ಭಾವ ಇಲ್ಲ. ಕಾಗಿನೆಲೆಗೆ ಹೋದರೆ ನಿಮಗೆ ಅರ್ಥವಾಗುತ್ತೆ. 45 ಕೋಟಿ ರೂ. ವೆಚ್ಚದಲ್ಲಿ ಅಲ್ಲಿ ಅಭಿವೃದ್ಧಿ ಮಾಡಿದ್ದೇನೆ. ಸುರೇಶ್ ಅಂಗಡಿ ಪತ್ನಿಯನ್ನು ಗೆಲ್ಲಿಸಿ ಕೊಟ್ರೆ ಏನು ಕೆಲಸ ಕಾರ್ಯ ಆಗಬೇಕು ಮಾಡಿ ಕೊಡ್ತಾರೆ. ಪ್ರಧಾನಿ ಕೈ ಬಲಪಡಿಸಲು ಇನ್ನೋರ್ವ ಸದಸ್ಯರನ್ನು ಕೊಟ್ಟಂತಾಗುತ್ತೆ. 17ನೇ ತಾರೀಖು ಬಂದು ಕಮಲಕ್ಕೆ ಮತ ನೀಡಿ ಎಂದು ಕೋರಲು ಬಂದಿದ್ದೇನೆ. ಎಲ್ಲಾ ಕಡೆ ಕೋವಿಡ್ ಮಹಾಮಾರಿ ಕಾಡ್ತಿದೆ. ಕೋವಿಡ್ ಕುರಿತಂತೆ ಇದೇ 18ರಂದು ಪ್ರತಿಪಕ್ಷ ನಾಯಕರ ಸಭೆ ಕರೆದಿದ್ದೇನೆ. ಈಗಾಗಲೇ ಕೆಲವು ಕಡೆ ನೈಟ್ ಕರ್ಫ್ಯೂ ಜಾರಿ ಇದೆ. ಬೇರೆ ಜಿಲ್ಲೆಗಳಲ್ಲೂ ಕೊರೊನಾ ಜಾಸ್ತಿ ಇದೆ. ಆದರೆ ನೈಟ್ ಕರ್ಫ್ಯೂ ಜಾರಿ ಮಾಡುತ್ತೇನೆ ಎಂದರು.
ಸೆಮಿ ಲಾಕ್‌ಡೌನ್ ಜಾರಿಯಿಲ್ಲ: ಮಹಾರಾಷ್ಟ್ರದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಹಾರಾಷ್ಟ್ರಕ್ಕೂ ನಮಗೂ ಸಂಬಂಧ ಇಲ್ಲ. ಸರ್ವಪಕ್ಷ ನಾಯಕರ ಸಭೆ ನಡೆಸಿ ಅವರ ಸಲಹೆಯಂತೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಈಗಾಗಲೇ ಕೆಲ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಇದರ ಫಲಿತಾಂಶ ಬರಬೇಕಂದ್ರೆ ನಾಲ್ಕಾರು ದಿನ ಕಾಯಬೇಕಾಗುತ್ತೆ. ಯಾವ್ಯಾವ ಜಿಲ್ಲೆಯಲ್ಲಿ ಕೊರೊನಾ ಜಾಸ್ತಿಯಾಗಿದೆ ಅಲ್ಲಿ ನೈಟ್ ಕರ್ಫ್ಯೂ ಹಾಕೋ ಬಗ್ಗೆ ಚರ್ಚೆ ಮಾಡ್ತೇನೆ. ರಾಜ್ಯದಲ್ಲಿ ಸೆಮಿ ಲಾಕ್‌ಡೌನ್ ಬಗ್ಗೆ ಯಾವುದೇ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಓದಿ: ಸುರೇಶ್ ಅಂಗಡಿ ಕುಟುಂಬದ ತ್ಯಾಗ ಅರ್ಥ ಮಾಡಿಕೊಂಡು ಮಂಗಳಾರಿಗೆ ಮತ ಹಾಕಿ.. ಸಿಎಂ ಬಿಎಸ್‌ವೈ