ಬೆಳಗಾವಿ: ಜಿಲ್ಲೆಯ ದಾಮಣೆ ನೆರೆ ಪ್ರದೇಶಕ್ಕೆ ಇಂದು ಸಿಎಂ ಬಿ.ಎಸ್.ಯಡಿಯೂರಪ್ಪ ತೆರಳಿ, ಸಂತ್ರಸ್ತರನ್ನು ಭೇಟಿ ಮಾಡಿದರು.
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಬಲಾಪುರದಲ್ಲಿ ಸಿಕ್ಕಿಹಾಕಿಕೊಂಡ ದಂಪತಿಯ ರಕ್ಷಣೆ ಮಾಡಲು ಕೇಂದ್ರದೊಂದಿಗೆ ಮಾತಾಡಲಾಗುವುದು. ಹೆಲಿಕಾಪ್ಟರ್ ಮೂಲಕ ದಂಪತಿಯನ್ನು ಹೊರ ತರುತ್ತೇವೆ. ಮೂರು ದಿನ ನಾನು ಈ ಭಾಗದಲ್ಲಿ ಇರುತ್ತೇನೆ ಎಂದರು.
ಇದೇ ವೇಳೆ ಬಾಗಲಕೋಟೆಯಲ್ಲಿ ಇಂದು ವಾಸ್ತವ್ಯ ಹೂಡುವುದಾಗಿ ತಿಳಿಸಿದ್ರು. ಸಿಎಂ ನೇತೃತ್ವದ ತಂಡ, ಜಗದೀಶ್ ಶೆಟ್ಟರ್ ನೇತೃತ್ವದ ತಂಡ, ಈಶ್ವರಪ್ಪ ನೇತೃತ್ವದ ತಂಡ ಹಾಗೂ ಶೋಭಾ ಕರಂದ್ಲಾಜೆ ನೇತೃತ್ವದ ತಂಡ ಇಡೀ ರಾಜ್ಯಾದ್ಯಂತ ಸಂಚರಿಸಲಿದೆ. ಕೃಷ್ಣಾ ನದಿಯಿಂದ ಮೂರು ಲಕ್ಷ ಕ್ಯೂಸೆಕ್, ಮಾರ್ಕಂಡೇಯ 38 ಸಾವಿರ ಕ್ಯೂಸೆಕ್, ಘಟಪ್ರಭಾ ಒಂದು ಲಕ್ಷ ಕ್ಯೂಸೆಕ್ ಹಾಗೂ ಆಲಮಟ್ಟಿಯಿಂದ 5 ಲಕ್ಷ ಕ್ಯೂಸೆಕ್ ನೀರು ಹೋಗುತ್ತಿದೆ.
ಇನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು, ಅಧಿಕಾರಿಗಳಿಗೆ ರಾತ್ರಿ ಹಗಲು ಕೆಲಸ ಮಾಡುವಂತೆ ಸಿಎಂ ಸೂಚಿಸಿದ್ದಾರೆ. ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡವರಿಗೆ ಮಳೆ ನಿಂತ ಮೇಲೆ ಪರಿಹಾರ ಕೊಡುವ ಕೆಲಸ ಮಾಡುತ್ತೇವೆ. ಮೂರ್ನಾಲ್ಕು ದಿನಗಳಲ್ಲಿ ರೈತರಿಗೆ ಮೊದಲ ಕಂತಿನಲ್ಲಿ ಎರಡು ಸಾವಿರ ನೀಡುತ್ತೇವೆ ಎಂದಿದ್ದಾರೆ.