ಬೆಳಗಾವಿ: ಇವತ್ತಿನಿಂದ ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದೆ. ಕೆಲವು ಬಿಲ್ಗಳು ಇವೆ. ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರ ಕೊಡಲು ನಮ್ಮ ಸರ್ಕಾರ ತಯಾರಿದೆ. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮಗಳ ಜೊತೆಗೆ ಅವರು ಮಾತನಾಡಿದರು.
ಪಂಚ ರಾಜ್ಯಗಳ ಚುನಾವಣೆಯಲ್ಲಿ ಗ್ಯಾರೆಂಟಿಗಳು ವರ್ಕೌಟ್ ಆಗಲಿಲ್ಲ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಸಿಎಂ, ಗ್ಯಾರೆಂಟಿ ವರ್ಕೌಟ್ ಆಗದೇ ತೆಲಂಗಾಣ ರಾಜ್ಯದಲ್ಲಿ ಗೆದ್ದೆವಾ? ಮಧ್ಯಪ್ರದೇಶದಲ್ಲಿ ಅಲ್ಲಿನ ಮುಖ್ಯಮಂತ್ರಿ ಗ್ಯಾರೆಂಟಿ ಘೋಷಣೆ ಮಾಡಿದ್ದರಲ್ಲಾ, ಅವರು ಯಾವುದರ ಮೇಲೆ ಗೆದ್ದರು? ನಾವು ಚುನಾವಣೆ ಗೆಲ್ಲಬೇಕು ಅಂತಾ ಅಲ್ಲ. ಎಲ್ಲ ಧರ್ಮ, ಜಾತಿಯ ಬಡವರಿಗೆ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ತುಂಬುವ ಉದ್ದೇಶದಿಂದ ಮಾಡಿರುವ ಕಾರ್ಯಕ್ರಮಗಳು ಇವು. ಗ್ಯಾರೆಂಟಿ ಅಂತಾ ಹೆಸರು ಇಟ್ಟಿದ್ದೇವೆ ಅಷ್ಟೇ. ಆದರೆ ಇವೆಲ್ಲಾ ಬಡವರ ಕಾರ್ಯಕ್ರಮಗಳು ಎಂದು ಸಮರ್ಥಿಸಿಕೊಂಡರು.
ರಾಜ್ಯದ ಹಣ ತೆಗೆದುಕೊಂಡು ತೆಲಂಗಾಣದಲ್ಲಿ ಜಾತ್ರೆ ಮಾಡಿದರು ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕನನ್ನು ನೇಮಿಸಲು ಆರು ತಿಂಗಳು ಬೇಕಾಯಿತು. ನಮ್ಮ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ? ಎಂದು ವಾಗ್ದಾಳಿ ಮಾಡಿದರು.
ಬಿಜೆಪಿ-ಜೆಡಿಎಸ್ ಜಂಟಿಯಾಗಿ ಕಾಂಗ್ರೆಸ್ ಪಕ್ಷವನ್ನು ಧೂಳಿಪಟ ಮಾಡುತ್ತೆ ಎಂಬ ವಿಜಯೇಂದ್ರ ಹೇಳಿಕೆಗೆ ಉತ್ತರಿಸಿ, ಅವರು ಜಂಟಿಯಾಗಿ ಆದ್ರೂ ಹೋರಾಟ ಮಾಡಲಿ, ಇಲ್ಲ ಪ್ರತ್ಯೇಕವಾಗಿಯಾದರೂ ಮಾಡಲಿ, ನಾವು ಎಲ್ಲದಕ್ಕೂ ತಯಾರಿದ್ದೇವೆ ಎಂದು ತಿರುಗೇಟು ಕೊಟ್ಟರು. ಸಚಿವರಾದ ಡಾ.ಜಿ.ಪರಮೇಶ್ವರ್, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಮತ್ತಿತರರು ಇದ್ದರು.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಪೊಳ್ಳು ಗ್ಯಾರಂಟಿಗಳನ್ನು ಜನ ನಂಬಲಿಲ್ಲ: ಬಿ.ವೈ.ವಿಜಯೇಂದ್ರ