ಬೆಂಗಳೂರು/ಬೆಳಗಾವಿ: ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಪ್ರತ್ಯೇಕ ರಾಜ್ಯದ ಬೇಡಿಕೆ ಸಲ್ಲದು ಹಾಗೂ ಅದು ತಾರತಮ್ಯ ನಿವಾರಣೆಗೆ ಪರಿಹಾರವೂ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸಭೆಯಲ್ಲಿ ಇಂದು ಉತ್ತರ ಕರ್ನಾಟಕದ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, "ಪ್ರತ್ಯೇಕ ಕರ್ನಾಟಕಕ್ಕೆ ಒತ್ತಾಯ ಮಾಡುವುದು ಏಕೀಕರಣಕ್ಕೆ ಹೋರಾಡಿ, ಪ್ರಾಣ ತ್ಯಾಗ ಮಾಡಿದವರಿಗೆ ನಾವು ಮಾಡುವ ಅವಮಾನ. ಏಕೀಕರಣಕ್ಕಾಗಿ ಬಹಳ ಜನ ಹೋರಾಡಿದರು. ಭಾಷಾವಾರು ಪ್ರಾಂತ್ರ್ಯ ರಚನೆಯಾಗುವಾಗಲೂ ಹೋರಾಟ ಮಾಡಿದವರಿದ್ದಾರೆ. ಹೈದರಾಬಾದ್ ಕರ್ನಾಟಕಕ್ಕೆ 371ಗೆ ತಿದ್ದುಪಡಿ ಆಗಿ 371 ಜೆ ಪರಿಚ್ಛೇದಕ್ಕಾಗಿ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ವೈಜನಾಥ್ ಪಾಟೀಲ್ ಮುಂತಾದವರು ಹೋರಾಡಿದ್ದಾರೆ. ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 2014 ಮತ್ತು 2017ರಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಯಾಗಿತ್ತು. ಈ ಬಗ್ಗೆ ಎರಡು ಗಂಟೆಗಳಿಗೂ ಹೆಚ್ಚು ಕಾಲ ಉತ್ತರ ನೀಡಿದ್ದೆ" ಎಂದು ಸಿಎಂ ನೆನಪು ಮಾಡಿಕೊಂಡರು.
"ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನ ಖರ್ಚಾಗಿ ಅಭಿವೃದ್ಧಿಯಾಗಬೇಕು. ಕಿತ್ತೂರು ಕರ್ನಾಟದ 5 ತಾಲೂಕುಗಳು ಸೇರಿದಂತೆ ಅತ್ಯಂತ ಹಿಂದುಳಿದ ತಾಲೂಕುಗಳಿಗೂ ಅನುದಾನ ಕೊಡಲಾಗುವುದು. ಕಲ್ಯಾಣ ಕರ್ನಾಟಕಕ್ಕೆ 2013-14ರಿಂದ ಈವರೆಗೆ 14877.36 ಕೋಟಿ ರೂಪಾಯಿಗಳು ಮೀಸಲಿಡಲಾಗಿದೆ. ಬಿಡುಗಡೆಯಾಗಿದ್ದು 10280 ಕೋಟಿ ರೂಪಾಯಿ ಹಾಗೂ 8330 ಕೋಟಿ ರೂಪಾಯಿ ವೆಚ್ಚವಾಗಿದೆ. ಮುಂದಿನ ವರ್ಷದಿಂದ 5000 ಕೋಟಿ ರೂಪಾಯಿಗಳನ್ನು ಕಲ್ಯಾಣ ಕರ್ನಾಟಕಕ್ಕೆ ನೀಡಲಾಗುವುದು. ಮುಂಬೈ ಕರ್ನಾಟಕದ ಹಿಂದುಳಿದ ತಾಲೂಕುಗಳಿಗೂ ಅನುದಾನ ನೀಡಲಾಗುವುದು" ಎಂದು ತಿಳಿಸಿದರು.
ಪ್ರತ್ಯೇಕ ರಾಜ್ಯಕ್ಕೆ ಅವಕಾಶ ಕೊಡಬೇಡಿ: ಬೆಳಗಾವಿ ಸಮಸ್ಯೆ, ಮಹಾರಾಷ್ಟ್ರ ಗಡಿ, ಉತ್ತರ ಕರ್ನಾಟಕ ಅಭಿವೃದ್ಧಿ ಚರ್ಚೆ ಆಗಬೇಕೆಂದು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಸುವರ್ಣ ಸೌಧ ನಿರ್ಮಿಸಿದ್ದಾರೆ. ಆದರೆ, ಲಾಭವೇನು?, ಸಮಸ್ಯೆಗಳ ಚರ್ಚೆಯಾಗುತ್ತಿಲ್ಲ. ನಾನು ಸಮಗ್ರ ಕರ್ನಾಟಕದ ಪರವಾಗಿದ್ದೇನೆ. ಕರ್ನಾಟಕ ಪ್ರತ್ಯೇಕತೆಗೆ ಎಂದಿಗೂ ಬೆಂಬಲ ಕೊಟ್ಟಿಲ್ಲ. ಚಾಮರಾಜನಗರದಿಂದ ಬೀದರ್, ಕೋಲಾರದಿಂದ ಕೊಡಗಿನವರೆಗೂ ಒಂದೇ ಎಂಬ ಭಾವನೆ ಗಟ್ಟಿಗೊಳಿಸಬೇಕು. ಅಭಿವೃದ್ಧಿ ಮತ್ತು ಸ್ಥಾನಮಾನಗಳಲ್ಲಿ ಸಮಾನ ಅವಕಾಶ ನೀಡುವ ಮೂಲಕ ಪ್ರತ್ಯೇಕ ರಾಜ್ಯದ ಕೂಗಿಗೆ ಅವಕಾಶ ನೀಡಬಾರದು ಎಂದು ಇದಕ್ಕೂ ಮುನ್ನ ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರಕ್ಕೆ ಸಲಹೆ ನೀಡಿದ್ದರು.
ಅಭಿವೃದ್ಧಿ ಹಾಗೂ ಸ್ಥಾನಮಾನಗಳ ಹಂಚಿಕೆಯಲ್ಲಿ ಪ್ರಾದೇಶಿಕ ತಾರತಮ್ಯವನ್ನು ನಿವಾರಿಸುವ ಮೂಲಕ ಪ್ರತ್ಯೇಕ ರಾಜ್ಯದ ಕೂಗು ಸೃಷ್ಟಿಯಾಗದಂತೆ ಎಚ್ಚರಿಕೆ ವಹಿಸಬೇಕು. ಬೆಳಗಾವಿ ಸುವರ್ಣಸೌಧ ನಿರ್ಮಾಣವಾದ ಮೇಲೆ ಇದು 11ನೇ ಅಧಿವೇಶನವಾಗಿದೆ. ಉತ್ತರ ಕರ್ನಾಟಕದ ಬಗ್ಗೆ ಮೊದಲ ದಿನವೇ ಇಲ್ಲಿ ಚರ್ಚೆಯಾಗಬೇಕಿತ್ತು. ಆದರೆ, ಈವರೆಗೂ ಆಗಲಿಲ್ಲ. ಹಾಗಿದ್ದರೆ ಈ ಭಾಗದಲ್ಲಿ ಅಧಿವೇಶನ ಮಾಡುವ ಉದ್ದೇಶವೇನು ಎಂದು ಅವರು ಪ್ರಶ್ನಿಸಿದ್ದರು.
ಇದನ್ನೂ ಓದಿ: ಬರ, ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಚರ್ಚಿಸಬೇಕು, ಧರಣಿ ಕೈಬಿಡಿ: ಪ್ರತಿಪಕ್ಷಗಳಿಗೆ ಪರಮೇಶ್ವರ್ ಮನವಿ