ಅಥಣಿ(ಬೆಳಗಾವಿ): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಕೈ ಮಿಲಾಯಿಸಿ ಸಮ್ಮಿಶ್ರ ಸರ್ಕಾರ ಕೆಡವಿ ಬಾಂಬೆಯಲ್ಲಿ 25 ಕೋಟಿ ರೂಪಾಯಿ ಖರ್ಚು ಮಾಡಿದ್ದು, ಏನು ದೇಣಿಗೆ ಕೊಟ್ಟಿದ್ದಾರೆ? ಹಾಲು ಕುಡಿದ ಮಕ್ಕಳು ಬದುಕುವುದಿಲ್ಲ, ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತಾವಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ಭಾನುವಾರ ಜಿಲ್ಲೆಯ ಹುಕ್ಕೇರಿ ಮತ್ತು ಚಿಕ್ಕೋಡಿ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತ, ಜೆಡಿಎಸ್ ಪಕ್ಷ ಯಾವುದೇ ಬಿ ಟೀಂ ಅಲ್ಲ, ಸಿದ್ದರಾಮಯ್ಯ ಅವರೇ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿಸಿದ್ದಾರೆ. ಕಾಂಗ್ರೆಸ್ ಪಕ್ಷವೇ ಬಿ ಟೀಂ ಎಂಬುದು ಹಲವಾರು ಬಾರಿ ಸಾಬೀತಾಗಿದೆ ಎಂದು ತಿರುಗೇಟು ಕೊಟ್ಟರು.
ಉತ್ತರ ಕರ್ನಾಟಕ ಭಾಗದಲ್ಲಿ ಅಭ್ಯರ್ಥಿಗಳನ್ನು ಹಾಕಿ 2023ಕ್ಕೆ ಗೆಲುವು ಸಾಧಿಸುವುದು ನಾವೇ. ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರ ಸಂಪರ್ಕದಲ್ಲಿ ಇದ್ದಾರೆ. ಅವರು ಇಬ್ಬರು ಸ್ನೇಹಿತರು. ಹಿಂಗಾಗಿ ಮಾತನಾಡುತ್ತಾರೆ. ಇದರಲ್ಲಿ ಬೇರೆ ಅರ್ಥ ಬೇಡ ಎಂದು ಹಲವು ಉದಾಹರಣೆ ನೀಡಿದರು.
ರಮೇಶ್ ಜಾರಕಿಹೊಳಿ ಅವರಿಗೆ ಬಿಜೆಪಿ ತಾಳಿ ಇದೆ. ನಾವು ಕನ್ಯೆ ಇದ್ದರೆ ಆಫರ್ ಕೊಡುತ್ತೇವೆ. ಸಿದ್ದರಾಮಯ್ಯ ಅವರಿಗೆ ವಿಧಾನಸಭಾ ಕ್ಷೇತ್ರದ ಚುನಾವಣೆ ನಿಲ್ಲುವುದಕ್ಕೆ ಸ್ಥಾನ ಸಿಗುತ್ತಿಲ್ಲ. ಬಾದಾಮಿ ಬಿಟ್ಟು ಪಲಾಯನ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಬೆಳಗಾವಿ ಭಾಗದಲ್ಲಿ ಕುಳಿತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಲಿಸ್ಟ್ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಓದಿ: ರಮೇಶ್ ಜಾರಕಿಹೊಳಿ ಬಗ್ಗೆ ವಿಶೇಷ ಪ್ರೀತಿ ಇದೆ: ಸಿ ಎಂ ಇಬ್ರಾಹಿಂ ಅಚ್ಚರಿ ಹೇಳಿಕೆ