ಬೆಳಗಾವಿ: ಸಾರಿಗೆ ನೌಕರರಿಗೆ ಮತ್ತೊಮ್ಮೆ ಕೈ ಜೋಡಿಸಿ ಪ್ರಾರ್ಥನೆ ಮಾಡುತ್ತೇನೆ. ಯಾರದೋ ಕಪಿಮುಷ್ಠಿಯಲ್ಲಿ ಸಿಲುಕಿ ಸತ್ಯಾಗ್ರಹ ಮಾಡುವುದು ಸರಿಯಲ್ಲ. ಮುಷ್ಕರದಿಂದ ಹೊರ ಬಂದು ಕೆಲಸಕ್ಕೆ ಬರುವ ಸಿಬ್ಬಂದಿಗೆ ಪೊಲೀಸರಿಂದ ರಕ್ಷಣೆ ಒದಗಿಸಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಸವದತ್ತಿ ತಾಲೂಕಿನ ಮುರುಗೋಡ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಎಸ್ಆರ್‌ಟಿಸಿ ಸಿಬ್ಬಂದಿ ಕೇಳಿದ ಒಂಭತ್ತು ಬೇಡಿಕೆ ಪೈಕಿ ಎಂಟು ಬೇಡಿಕೆ ಈಡೇರಿಸಿದ್ದೇನೆ. ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ. ಬನ್ನಿ ಕುಳಿತು ಮಾತಾಡೋಣ. ನಮ್ಮ ಹಣಕಾಸಿನ ಸ್ಥಿತಿ ಸರಿ ಇಲ್ಲದಿದ್ದರೂ ಎರಡು ಸಾವಿರದ ಇನ್ನೂರು ಕೋಟಿ ಸಂಬಳ ಕೊಟ್ಟಿದ್ದೇನೆ. ಇಂತಹ ಸಂದರ್ಭವನ್ನು ಅವರು ಅರ್ಥ ಮಾಡಿಕೊಳ್ಳದೆ ಯಾರದೋ ಕಪಿಮುಷ್ಠಿಯಲ್ಲಿ ಸಿಲುಕಿ ಸತ್ಯಾಗ್ರಹ ಮಾಡುವುದು ಸರಿಯಲ್ಲ ಎಂದರು.
ನಾನು ಮತ್ತೊಮ್ಮೆ ಕೈ ಜೋಡಿಸಿ ಪ್ರಾರ್ಥನೆ ಮಾಡುತ್ತೇನೆ. ಸಾರ್ವಜನಿಕರಿಗೆ ತೊಂದರೆ ಮಾಡಬೇಡಿ. ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆ ಬಹಳ ಮುಖ್ಯವಾಗಿದೆ. ಪರ್ಯಾಯ ವ್ಯವಸ್ಥೆ ಏನೇ ಮಾಡಿದ್ರೂ ಜನರಿಗೆ ತೊಂದರೆಯಾಗುವುದು ತಪ್ಪಲ್ಲ. ದಯಮಾಡಿ ಬಸ್‌ಗಳು ಓಡಾಡೋಕೆ ಅನುಕೂಲ ಮಾಡಿಕೊಡಬೇಕು. ಹಣಕಾಸಿನ ವ್ಯವಸ್ಥೆ ಇತಿಮಿತಿಯಲ್ಲಿ ಎಲ್ಲವನ್ನೂ ಸರಿ ಮಾಡಲು ಸಿದ್ಧರಿದ್ದೇವೆ. ದಯಮಾಡಿ ಸಹಕರಿಸಬೇಕು. ನಾವು ಬಿಗಿಯಾದ ಕಾನೂನು ಕ್ರಮವನ್ನ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಬೇಡಿ ಎಂದು ಮನವಿ ಮಾಡಿಕೊಂಡರು.
ಸಾರಿಗೆ ಸಿಬ್ಬಂದಿಯಲ್ಲೇ ಗುಂಪುಗಾರಿಕೆ ಮಾಡಿಕೊಂಡು ಚಳುವಳಿ ಮುಂದುವರೆಸಬೇಕು ಅಂತಾ ಷಡ್ಯಂತ್ರ ಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡದೇ, ಸಿಬ್ಬಂದಿ ಹೊರ ಬಂದರೆ ಅವರಿಗೆ ಬೇಕಾದ ಪೊಲೀಸ್ ರಕ್ಷಣೆ ಕೊಡಲು ಸಿದ್ಧರಿದ್ದೇವೆ ಎಂದರು.
ಓದಿ: ಸಾರಿಗೆ ನೌಕರರ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು : ಜಯ ಮೃತ್ಯುಂಜಯ ಸ್ವಾಮೀಜಿ