ಬೆಳಗಾವಿ: ನನಗೆ ಕಾಂಗ್ರೆಸ್ ನಾಯಕರ ಸರ್ಟಿಫಿಕೇಟ್ ಬೇಕಿಲ್ಲ. ರಾಜ್ಯದ ಜನರ ಸರ್ಟಿಫಿಕೇಟ್ ಬಯಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ನಗರದ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ನಾಯಕರು ಹತಾಶರಾಗಿದ್ದಾರೆ. ಇದು ಅವರ ಮಾತುಗಳಿಂದಲೇ ಗೊತ್ತಾಗುತ್ತದೆ. ಮನುಷ್ಯ ಹತಾಶೆಯಾದಾಗ ಇಂತಹ ಮಾತುಗಳು ಬರುವುದು ಸಹಜ.
ನಾವು ಅವರಂತೆ ಮಾತನಾಡುವುದು ಬೇಡ. ಕಾಂಗ್ರೆಸ್ ಪಕ್ಷದ ನಾಯಕರಿಂದ ನಮಗೆ ಯಾವುದೇ ಸರ್ಟಿಫಿಕೇಟ್ ಬೇಕಿಲ್ಲ. ರಾಜ್ಯದ ಜನರಿಂದ ನಾವು ಸರ್ಟಿಫಿಕೇಟ್ ಪಡೆಯುತ್ತೇವೆ ಎಂದರು.
ಕಾಂಗ್ರೆಸ್ ತಮ್ಮ ಸರ್ಕಾರದ ಸಮಯದಲ್ಲಿ ಏನೂ ಮಾಡಲಿಲ್ಲ. ಆಗ ಅಭಿವೃದ್ಧಿ ವಿಚಾರ ಬಂದಾಗ ದೂರ ಉಳಿದಿದ್ದರು. ತಾವು ಏನೂ ಮಾಡಲಿಲ್ಲ ಎಂಬುದನ್ನು ಮರೆಮಾಚಲು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ದೂರಿದರು.
ಬೆಳಗಾವಿ ಜಿಲ್ಲೆ ನಮಗೆ ಮುಖ್ಯ: ಬೆಳಗಾವಿ ಜಿಲ್ಲೆ ನಮಗೆ ವಿಶೇಷ ಮತ್ತು ಮುಖ್ಯವಾಗಿದೆ. ಬೆಳಗಾವಿ ಜಿಲ್ಲೆ ಬಿಜೆಪಿಗೆ ದೊಡ್ಡ ಬಲ ಕೊಟ್ಟಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ. ವಿಜಯದ ಪರಂಪರೆ ಬಿಜೆಪಿಗೆ ಸದಾಕಾಲ ಇದೆ.
ಮಹಾಂತೇಶ್ ಕವಟಗಿಮಠ ಅವರನ್ನ ಆಯ್ಕೆ ಮಾಡಿ ತರುವಂತೆ ಪದಾಧಿಕಾರಿಗಳಿಗೆ ಮನವಿ ಮಾಡಿದ ಸಿಎಂ, ಎಲ್ಲ ಶಾಸಕರು ಒಗ್ಗಟ್ಟಾಗಿ ಮಹಾಂತೇಶ್ ಕವಟಗಿಮಠಗೆ ಪ್ರಥಮ ಪ್ರಾಶಸ್ತ್ಯದ ಮತ ಕೊಡಿಸಬೇಕು.
ಮುಂದಿನ ವರ್ಷ ಚುನಾವಣಾ ರಾಜಕಾರಣ ತೀವ್ರವಾಗಿ ನಡೆಯುತ್ತದೆ. ಮಹಾಂತೇಶ್ ಕವಟಗಿಮಠ ಗೆಲುವು ನಿಶ್ಚಿತ. ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆ ಕೂಡ ನಮಗೆ ಬಹಳ ಮುಖ್ಯ. ಜಿಪಂ, ತಾಪಂ ಚುನಾವಣೆ ವೇಳೆ ಬೆಳಗಾವಿಯಲ್ಲಿ ಅತೀ ಹೆಚ್ಚು ಸ್ಥಾನ ಗೆಲ್ಲಬೇಕಿದೆ.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಆಯ್ಕೆ ಆಗಲು ನೆರವಾಗಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆತಂಕ ಇದೆ. ಹೀಗಾಗಿ, ಡಿ ಕೆ ಶಿವಕುಮಾರ್ ಎಲ್ಲ ತಾಲೂಕುಗಳಿಗೆ ಓಡಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ : ಬೆಂಬಲ ಕೊಡುವುದು ಜಿಲ್ಲಾ ಕಾರ್ಯಕರ್ತರಿಗೆ ಬಿಟ್ಟ ವಿಚಾರ.. ಹೆಚ್ಡಿಕೆ ಹೇಳಿಕೆಗೆ ಬಿಎಸ್ವೈ ಸಂತಸ..