ಬೆಳಗಾವಿ : ರಾಜ್ಯ ಸರ್ಕಾರ ಖಾಸಗೀಕರಣದ ಧೋರಣೆಯನ್ನು ಕೈಬಿಡಬೇಕೆಂದು ಒತ್ತಾಯಿಸಿ ನಗರದ ಡಿಸಿ ಕಚೇರಿ ಎದುರು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಪದಾಧಿಕಾರಿಗಳು, ಕೋವಿಡ್-19 ಮಟ್ಟ ಹಾಕಲು ಸೇವೆ ಸಲ್ಲಿಸುತ್ತಿರುವವರಿಗೆ ಸುರಕ್ಷತೆ ನೀಡಬೇಕು. ಪ್ರತಿಯೊಬ್ಬರಿಗೂ ಆರು ತಿಂಗಳವರೆಗೆ 7,000 ರೂ. ಮಾಸಿಕ ಪರಿಹಾರ ಧನ ನೀಡಬೇಕು. ಕುಟುಂಬದ ಪ್ರತಿ ಸದಸ್ಯನಿಗೂ ಮಾಸಿಕ 10 ಕಿಲೋ ಉಚಿತ ಆಹಾರ ಧಾನ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಕನಿಷ್ಠ 200 ದಿನಗಳ ಕೆಲಸ ನೀಡಬೇಕು. ಉದ್ಯೋಗ ಖಾತ್ರಿ ವೇತನವನ್ನು 600 ರೂ.ಗಳವರೆಗೆ ವಿಸ್ತರಿಸಬೇಕು. ನೂತನ ಕಾಯ್ದೆಗಳನ್ನು ರದ್ಧುಗೊಳಿಸಬೇಕು. ರಾಜ್ಯ ಸರ್ಕಾರ ಖಾಸಗೀಕರಣದ ಧೋರಣೆಯನ್ನ ಕೈಬಿಡಬೇಕು. ಎಪಿಎಂಸಿ, ಭೂಸುಧಾರಣಾ ಕಾಯ್ದೆ, ಕಾರ್ಮಿಕ ಕಾನೂನು ತಿದ್ದುಪಡಿ ಸೇರಿದಂತೆ ಅಗತ್ಯ ಸೇವಾ ಸುಗ್ರೀವಾಜ್ಞೆಗಳನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು.