ಚಿಕ್ಕೋಡಿ(ಬೆಳಗಾವಿ): ಹಿರೇಕೋಡಿ ಜೈನಮುನಿ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿರುವ ಹಿನ್ನೆಲೆ, ಸಿಐಡಿ ಅಧಿಕಾರಿಗಳು ಚಿಕ್ಕೋಡಿಯಲ್ಲಿ ತನಿಖೆಯನ್ನು ಚುರುಕು ಗೊಳಿಸಿದ್ದಾರೆ. ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿಪರ್ವತ ಆಶ್ರಮಕ್ಕೆ ಸಿಐಡಿ ಉನ್ನತಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸಿಐಡಿ ಐಜಿ ಪ್ರವೀಣ ಮಧುಕರ್ ಪವಾರ್ ಹಾಗೂ ಎಫ್‌ಎಸ್‌ಎಲ್ ನಿರ್ದೇಶಕ ಧರ್ಮೇಂದ್ರ ಕುಮಾರ್ ಮೀನಾ ಸೇರಿ ಇತರ ಹಿರಿಯ ಅಧಿಕಾರಿಗಳು ಜೈನಮುನಿಗಳು ಇದ್ದ ಕೊಠಡಿ ಪರಿಶೀಲನೆ ನಡೆಸಿ, ತನಿಖೆ ಮುಂದುವರಿಸಿದ್ದಾರೆ.
ಬೆಳಗಾವಿ ಎಸ್‌ಪಿ ಡಾ.ಸಂಜೀವ್ ಪಾಟೀಲ್, ಚಿಕ್ಕೋಡಿ ಡಿವೈಎಸ್‌ಪಿ ಬಸವರಾಜ ಯಲಿಗಾರ, ಸಿಪಿಐ ಆರ್.ಆರ್.ಪಾಟೀಲ್‌ರಿಂದ ಹಾಗೂ ಹತ್ಯೆಯಾದ ಜೈನಮುನಿಯ ಸಂಬಂಧಿಕರಿಂದ ಸಿಐಡಿ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಿಐಡಿ ಅಧಿಕಾರಿಗಳ ತಂಡದೊಂದಿಗೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಜೈನಮುನಿ ಹತ್ಯೆ ಪ್ರಕರಣ ದೇಶಾದ್ಯಂತ ಸಂಚಲ ಮೂಡಿಸಿತ್ತು. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಾದ ನಾರಾಯಣ ಮಾಳಿ, ಹಾಸನ್ ಸಾಬ್ ದಲಾಯಿತ್ ಎಂಬ ಆರೋಪಿಗಳನ್ನು ಚಿಕ್ಕೋಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು, ಈ ಪ್ರಕರಣವನ್ನು ಸಿಬಿಐಗೆ ಕೊಡುವಂತೆ ರಾಜ್ಯಾದ್ಯಂತ ಹಾಗೂ ವಿಪಕ್ಷ ನಾಯಕರು ಸದನದಲ್ಲಿ ಧ್ವನಿ ಎತ್ತಿದ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿ ಆದೇಶಿಸಿದ್ದರು.
ಕಳೆದ ವಾರ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಸ್ತರಣೆ: ಹಿರೇಕೋಡಿ ಜೈನಮುನಿ ಹತ್ಯೆಯ ಪ್ರಮುಖ ಆರೋಪಿಗಳನ್ನು ಚಿಕ್ಕೋಡಿ ನ್ಯಾಯಾಲಯ ಕಳೆದ ವಾರ ಐದು ದಿನಗಳವರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಎರಡು ವಾರಗಳ ಹಿಂದೆ ಚಿಕ್ಕೋಡಿ ಪೊಲೀಸರು ಹೆಚ್ಚಿನ ತನಿಖೆಗಾಗಿ ಏಳು ದಿನಗಳವರಿಗೆ ಪೊಲೀಸ್ ಕಸ್ಟಡಿಗೆ ಪಡೆದಿದ್ದರು. ಆ ಕಾಲಾವಕಾಶ ಮುಗಿಯುತ್ತಿದ್ದಂತೆ ಜು.17ರಂದು ಚಿಕ್ಕೋಡಿ ಪ್ರಧಾನ ದಿವಾಣಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶ ಚಿದಾನಂದ ಬಡಿಗೇರ ಅವರು ವಿಚಾರಣೆ ನಡೆಸಿ ಮತ್ತೆ 5 ದಿನಗಳವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶಿಸಿದ್ದರು.
ಆರೋಪಿತರಾದ ನಾರಾಯಣ ಮಾಳಿ ಹಾಗೂ ಹಸನಸಾಬ್ ದಲಾಯತ ಇಬ್ಬರು ಆರೋಪಿತಗಳನ್ನು ಭಾರಿ ಭದ್ರತೆಯೊಂದಿಗೆ ಬೆಳಗಾವಿಯ ಹಿಂಡಲಗಾ ಜೈಲಿಗೆ ರವಾನಿಸಲಾಗಿತ್ತು. ಇಬ್ಬರು ಆರೋಪಿತರನ್ನು ಜು.21ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಚಿಕ್ಕೋಡಿ ಸಿಪಿಐ ಆರ್.ಆರ್ ಪಾಟೀಲ ನೇತೃತ್ವದಲ್ಲಿ ಆರೋಪಿಗಳನ್ನು ಬೆಳಗಾವಿಯ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು.
ಕೊಳವೆ ಬಾವಿಯಲ್ಲಿ ಪತ್ತೆಯಾಗಿದ್ದ ಜೈನಮುನಿ ಮೃತದೇಹ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿ ಪರ್ವತ ಜೈನ ಆಶ್ರಮದ ಜೈನಮುನಿ ಜು.6 ರಂದು ನಾಪತ್ತೆಯಾಗಿದ್ದರು. ಎರಡು ದಿನದ ಬಳಿಕ ಅವರ ದೇಹ ಕೊಳವೆ ಬಾವಿಯಲ್ಲಿ ತುಂಡು ತುಂಡಾಗಿ ಶವವಾಗಿ ಪತ್ತೆಯಾಗಿತ್ತು. ರಾಯಬಾಗ ತಾಲೂಕಿನ ಕಡಕಬಾವಿ ಗ್ರಾಮದಲ್ಲಿ ಕೊಳವೆ ಬಾವಿಯಲ್ಲಿ ದೇಹ ಪತ್ತೆಯಾಗಿದ್ದು, ಹಂತಕರು ದೇಹವನ್ನು ಹಲವು ಭಾಗಗಳಾಗಿ ಕತ್ತರಿಸಿ ಕೊಳವೆ ಬಾವಿಗೆ ಎಸೆದಿದ್ದರು.
ಇದನ್ನೂ ಓದಿ: ಬೆಂಗಳೂರು: ಪೋಕ್ಸೋ ಪ್ರಕರಣದ ಆರೋಪಿಯಿಂದ ಶಂಕಿತ ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಕೆ