ಬೆಳಗಾವಿ: ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣೆಯ ಬಳಿ ಕಾರಿನಲ್ಲಿದ್ದ 4 ಕೆಜಿ 900 ಗ್ರಾಂ ಚಿನ್ನ ಕಳ್ಳತನ ಪ್ರಕರಣದ ಸಂಬಂಧ ಕಿರಣ್ ವೀರನಗೌಡರನನ್ನು ಸಿಐಡಿ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಬೆಳಗಾವಿಯ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿನ್ನೆಯಷ್ಟೇ ಕಿರಣ್ನನ್ನು ಸಿಐಡಿ ವಶಕ್ಕೆ ನೀಡಿದೆ. ನಿನ್ನೆ ರಾತ್ರಿ ಸಂಕೇಶ್ವರ ಪಟ್ಟಣದಲ್ಲಿ ಸಿಐಡಿ ವಶದಲ್ಲಿದ್ದ ಕಿರಣ್ನನ್ನು ಇಂದು ಬೆಳಗ್ಗೆ ಅಲ್ಲಿಂದ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ.
ಈ ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ. ಹೀಗಾಗಿ ಕಿರಣ್ ಸಿಐಡಿ ಮುಂದೆ ನೀಡುವ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಈ ಪ್ರಕರಣದಡಿ ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ.
ಕಿರಣ್ಗೆ ಮತ್ತೊಂದು ಸಂಕಷ್ಟ:
ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಣ್ ವೀರನಗೌಡರ ವಿರುದ್ಧ ಸಿಐಡಿ ಪೊಲೀಸರು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸಿದ್ದಾರೆ. ಸೆಕ್ಷನ್ 468, 565, 419 ಮತ್ತು 471ರ ಪ್ರಕಾರ ದೂರು ದಾಖಲಿಸಲಾಗಿದೆ.
ಇದನ್ನೂ ಓದಿ: 4.9 ಕೆ.ಜಿ ಚಿನ್ನ ಎಗರಿಸಿದ್ದ ಖಾಕಿ: ಖೆಡ್ಡಾಕ್ಕೆ ಬಿದ್ದ ಆರೋಪಿ, 14 ದಿನ ಸಿಐಡಿ ಕಸ್ಟಡಿ
ಜನವರಿ 10ರಂದು ಆರೋಪಿ ಕಿರಣ ವೀರನಗೌಡ ತಾನು ಪೊಲೀಸ್ ಸಿಬ್ಬಂದಿ ಎಂದು ಹೇಳಿ ಹಿರೇಬಾಗೇವಾಡಿ ಟೋಲ್ ನಾಕಾದಲ್ಲಿ ಟೋಲ್ ಫೀ ಪಾವತಿಸದೆ ಹೋಗಿದ್ದಾನೆ. ಇದರಿಂದ ಟೋಲ್ ನಾಕಾಕ್ಕೆ ಮತ್ತು ಸರ್ಕಾರಕ್ಕೆ ವಂಚಿಸಿದ್ದಾನೆ ಎಂದು ದೂರು ನೀಡಲಾಗಿದೆ.