ಚಿಕ್ಕೋಡಿ : ನಿಪ್ಪಾಣಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರನ್ನು ಬೆದರಿಸಿ ಗಲಾಟೆ ಮಾಡಿ ಕೊರೊನಾ ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸಲಾಗಿತ್ತು. ಜುಲೈ 25 ರಂದು ಈ ಘಟನೆ ನಡೆದಿದ್ದು, ಇಂದು ನಿಪ್ಪಾಣಿ ಸರ್ಕಾರಿ ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಲಾಗಿದೆ.
ಕೊರೊನಾ ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸಬೇಕು ಎಂದು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಕುಟುಂಬಸ್ಥರು ಗಲಾಟೆ ಮಾಡಿದ್ದರು. ಕೊರೊನಾ ಪಾಸಿಟಿವ್ ಇದ್ದರೂ ಸ್ಥಳೀಯ ಆಸ್ಪತ್ರೆಯಲ್ಲೇ ಹೆರಿಗೆ ಮಾಡುವಂತೆ ವೈದ್ಯರಿಗೆ ಬೆದರಿಕೆ ಹಾಕಿದ್ದರು. ಅಷ್ಟೇ ಅಲ್ಲ, ಗರ್ಭಿಣಿಯನ್ನ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಸಿಬ್ಬಂದಿಗೆ ಹಾಗೂ ವೈದ್ಯರಿಗೆ ಧಮ್ಕಿ ಹಾಕಿದ್ದರು.
ನಿನ್ನೆ ಹೆರಿಗೆ ನೋವಿನಿಂದ ಮಹಿಳೆ ಆಸ್ಪತ್ರೆಗೆ ಆಗಮಿಸಿದ್ದರು. ಬಳಿಕ ಆಕೆಗೆ ರ್ಯಾಪಿಡ್ ಟೆಸ್ಟ್ ನಡೆಸಿದ್ದು, ಕೊರೊನಾ ಸೋಂಕು ಪತ್ತೆಯಾಗಿದೆ. ಬಳಿಕ ಕುಟುಂಬಸ್ಥರ ಒತ್ತಾಯದ ಹಿನ್ನೆಲೆ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲಾಗಿತ್ತು. ಸದ್ಯ ಆಸ್ಪತ್ರೆ ಸೀಲ್‌ಡೌನ್ ಮಾಡಲಾಗಿದೆ.
ಸ್ಯಾನಿಟೈಸ್ ಮಾಡಿ ಎರಡು ದಿನಗಳ ಕಾಲ ಬೀಗ ಹಾಕಲಾಗಿದೆ. ಕುಟುಂಬಸ್ಥರ ಗೂಂಡಾ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ ಆಸ್ಪತ್ರೆ ಸಿಬ್ಬಂದಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.