ಬೆಳಗಾವಿ: ಯತ್ನಾಳ್ ಆರೋಪ ಮಾಡಿರುವ ಸಿಡಿಯಲ್ಲಿನ ಸತ್ಯಾಂಶ ತಿಳಿದುಕೊಳ್ಳಲು ಸಿಡಿ ಯಾರ ಕಡೆ ಇದ್ರೂ, ಅವರು ಅದನ್ನು ಬಿಡುಗಡೆ ಮಾಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ.
ನಗರದಲ್ಲಿ ಯತ್ನಾಳ್ ಆರೋಪ ಮಾಡಿದ ಸಿಡಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಕಡೆ ಯಾವ ಸಿಡಿನೂ ಇಲ್ಲ. ಸಿಡಿ ವಿಚಾರವೂ ಗೊತ್ತಿಲ್ಲ. ಸಿಡಿ ಇದ್ದವರು, ಹಣ ಇದ್ದೋರು ಮಂತ್ರಿ ಆಗಿದ್ದಾರೆ ಎಂದು ವಿಜಯಪುರ ನಗರ ಶಾಸಕ ಬಸವರಾಜ ಯತ್ನಾಳ್ ಆರೋಪ ಮಾಡಿದ್ದಾರೆ.
ಆದ್ರೆ ಸಿಡಿ ಯಾರ ಕಡೆ ಇದ್ರೂನೂ, ಅವರು ಅದನ್ನು ಬಿಡುಗಡೆ ಮಾಡಬೇಕು. ಸಿಡಿ ಸತ್ಯಾಸತ್ಯತೆ ತಿಳಿಯಲು ಸಿಎಂ ಅವರೆ ತನಿಖೆಗೆ ಆದೇಶ ನೀಡಬೇಕು. ಸಿಡಿ ಬಗೆಗಿನ ಸತ್ಯ ತಿಳಿಯಲು ಸಾಕಷ್ಟು ತಂತ್ರಜ್ಞಾನಗಳಿದ್ದು, ಅದರಲ್ಲಿನ ಸತ್ಯಾಂಶ ತಿಳಿದುಕೊಳ್ಳಲು ಪ್ರಯತ್ನ ಮಾಡಬೇಕು. ಸಿಎಂ ತನಿಖೆಗೆ ಆದೇಶ ಮಾಡುವುದು ನಮಗೆ ಅನುಮಾನ ಇದೆ. ಸಿಡಿಯಲ್ಲಿ ಏನಿದೆ ಎಂಬುವುದರ ಬಗ್ಗೆ ಆರೋಪ ಮಾಡಿದ ಯತ್ನಾಳ್ ಅವರೇ ಹೇಳಬೇಕು. ಇಲ್ಲಾವಾದರೆ ಸಿಡಿ ಬಗ್ಗೆ ನಿಗೂಢತೆ ಉಳಿದುಕೊಳ್ಳಲಿದೆ ಎಂದರು.
ಕಾಂಗ್ರೆಸ್ ಪಕ್ಷದಿಂದ ರಾಜೀನಾಮೆ ನೀಡಿರುವವರೇ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂಬ ಹೇಳಿಕೆಗೆ, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದವರು ನಮ್ಮ ಪಕ್ಷದವರಲ್ಲ. ರಾಜೀನಾಮೆ ಕೊಟ್ಮೇಲೆ ಅವರು ನಮ್ಮವರಲ್ಲ. ಅವರೀಗ ಬಿಜೆಪಿಯವರು, ಕಟ್ಟಾ ಆರ್ಎಸ್ಎಸ್ ಬೆಂಬಲಿಗರಾಗಿದ್ದಾರೆ. ರಾಜೀನಾಮೆ ಕೊಟ್ಟು ಹೋದವರಲ್ಲಿ ಯಾರು ನಮ್ಮ ಪಕ್ಷಕ್ಕೆ ಬರುವುದಿಲ್ಲ. ಆ ಪಕ್ಷದಲ್ಲಿ ಅಸಮಾಧಾನ ವ್ಯಕ್ತವಾಗಿರಬಹದು. ಇವರನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಬಂದಿಲ್ಲ. ಚುನಾವಣೆ ಸಂದರ್ಭದಲ್ಲಿ ನೋಡೋಣ ಎಂದರು.
ಬೆಳಗಾವಿ ಲೋಕಸಭಾ ಉಪಚುನಾವಣೆ ಕಾಂಗ್ರೆಸ್ ಟಿಕೆಟ್ ವಿಚಾರಕ್ಕೆ ಜನವರಿ 20ರಂದು ಉಪಚುನಾವಣೆ ದಿನಾಂಕ ಘೋಷಣೆ ಬಗ್ಗೆ ಸುದ್ದಿ ಇದೆ. ಅಮಿತ್ ಶಾ ಬೆಳಗಾವಿಗೆ ಬಂದು ಹೋದ ಮೇಲೆ ಡಿಕ್ಲೇರ್ ಆಗುವ ಅಂದಾಜಿದೆ. ಈ ತಿಂಗಳಾಂತ್ಯದೊಳಗೆ ಚುನಾವಣೆ ಘೋಷಣೆ ಮಾಡಲೇಬೇಕಲ್ಲ. ಫೆಬ್ರವರಿ ಅಂತ್ಯದೊಳಗೆ ಚುನಾವಣೆ ಮುಗಿಯಬೇಕು. ಅಭ್ಯರ್ಥಿ ಆಯ್ಕೆ ಇನ್ನೂ ಚರ್ಚೆ ಹಂತದಲ್ಲಿ ಇದೆ ಕಾದು ನೋಡೋಣ. ಚುನಾವಣೆ ಘೋಷಣೆಗೂ ಮುನ್ನ ಅಂತಿಮವಾಗಿ ಒಂದು ಹೆಸರು ಹೇಳ್ತೀವಿ. ಅಭ್ಯರ್ಥಿ ಆಯ್ಕೆ ಇನ್ನೂ ಚರ್ಚೆ ಹಂತದಲ್ಲಿದೆ. ಚುನಾವಣೆಗೆ ನಿಲ್ಲಲೇಬೇಕು ಅಂತಾ ಒತ್ತಡ ಏನೂ ಇಲ್ಲ. ಅಂತಿಮವಾಗಿ ಜಿಲ್ಲಾ ಕಮಿಟಿಯಿಂದ ಹೈಕಮಾಂಡ್‌ಗೆ ಒಂದು ಹೆಸರು ಶಿಫಾರಸು ಮಾಡಲಾಗುವುದು ಎಂದರು.
ಇದನ್ನೂ ಓದಿ:ಸಿಡಿ ವಿಚಾರ, ಸಂಪುಟ ವಿಸ್ತರಣೆ ಅಸಮಾಧಾನ ಕುರಿತು ಮಾತನಾಡಬೇಡಿ: ಶಾಸಕರು, ಸಚಿವರಿಗೆ ಬಿಜೆಪಿ ಸೂಚನೆ!
ಮುಂಬರುವ ಚುನಾವಣೆಯಲ್ಲಿ ಸಿಎಂ ರೇಸ್ ವಿಚಾರಕ್ಕೆ, ನಾನು ಸಿಎಂ ರೇಸ್ನಲ್ಲಿ ಇಲ್ಲ. ಜನರ ಮಧ್ಯೆ ಓಡಾಡಿಕೊಂಡು ಅರಾಮ ಆಗಿ ಇದ್ದೇನೆ. ನಾನು 2023 ಚುನಾವಣೆ ರೇಸ್ನಲ್ಲಿ ಇಲ್ಲ. ನೆಕ್ಸ್ಟ್ ಅಂತಾ ಹೇಳಿದ್ದೇನಿ. ಇಷ್ಟರಲ್ಲೇ ಹೇಗೆ ಹೇಳೊದಕ್ಕೆ ಆಗುತ್ತೆ. ಬೋರ್ಡ್ ಡಿಸ್‌ಪ್ಲೇನೆ ಆಗಿಲ್ಲ. ವಿಮಾನ ಬಂದಿದೆ, ಬಸ್ ಬಂದಿದೆ ಅಂತಾ ಹೇಳೊಕೆ ಆಗಲ್ಲ. ಸೀಟ್ ಈಗಲೇ ಬುಕಿಂಗ್ ಮಾಡುವುದರ ಬಗ್ಗೆ ಹೇಳಿದ್ರೆ ತಪ್ಪಾಗುತ್ತೆ ಎಂದರು.
ಗ್ರಾಮೀಣ ಕ್ಷೇತ್ರದ ವಿಚಾರಕ್ಕೆ ರಮೇಶ ಜಾರಕಿಹೊಳಿ ರಾಜಕೀಯವಾಗಿ ಗೆಲುವು ಸಾಧಿಸಲು ಪ್ರಯತ್ನ ಮಾಡುತ್ತಾರೆ. ಆದ್ರೆ ನಮ್ಮ ಅಭ್ಯರ್ಥಿಗಳ ಗೆಲುವು ಸಾಧಿಸಲು ಬೆಂಬಲವಾಗಿ ನಿಲ್ತೇವೆ. ಈಗೆಲ್ಲಾ ಫ್ರೀ ಇದ್ದಾರೆ. ಆಮೇಲೆ ತಮ್ಮ ಕ್ಷೇತ್ರವನ್ನೇ ಉಳಿಸಿಕೊಳ್ಳಲು ಕಷ್ಟವಾಗುತ್ತದೆ. ಇವಾಗ ಫ್ರೀ ಇದ್ದಾರೆ ಹಾಗಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಜಾರಕಿಹೊಳಿ ಹೇಳಿದರು.