ಅಥಣಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ರೈತ ಸುಮಾರು ಮೂರು ಎಕರೆ ಜಮೀನಿನಲ್ಲಿ ಬೆಳೆದ ದಪ್ಪ ಮೆಣಸು ಬೆಳೆಯು ಅಕ್ಷರಶಃ ಮಣ್ಣು ಪಾಲಾಗಿದೆ.
ಮೂರು ಎಕರೆ ಪ್ರದೇಶದಲ್ಲಿ ನಲವತ್ತು ಸಾವಿರ ಗಿಡಗಳನ್ನು ನಾಟಿ ಮಾಡಿ ಐದು ಲಕ್ಷ ಹಣ ಖರ್ಚುಮಾಡಿ ಬೆಳೆದಿರುವ ಬೆಳೆಗೆ ಖರೀದಿದಾರರು ಹಾಗೂ ವ್ಯಾಪಾರಸ್ಥರು ಇಲ್ಲದೇ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಿರುವ ದೃಶ್ಯ ನಿಜಕ್ಕೂ ಹೃದಯವಿದ್ರಾವಕವಾಗಿದೆ. ತೋಟಗಾರಿಕೆ ಬೆಳೆಯಾದ ದಪ್ಪ ಮೆಣಸಿನಕಾಯಿ ಬೆಳೆದು ರೈತರ ಬಾಳನ್ನು ಬೆಳೆಯಬೇಕಿದ್ದ ಮೆಣಸು ರೈತನ ಜೀವನಕ್ಕೆ ಖಾರವಾಗಿ ಪರಿಣಮಿಸಿದೆ, ಬೇಡಿಕೆ ವಹಿವಾಟು ಇಲ್ಲದೇ, ಗಿಡದಲ್ಲಿ ಹಣ್ಣಾಗಿ ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ.
ಇದರಿಂದ ಕೈಯಲ್ಲಿದ್ದ ಖರ್ಚು ಮಾಡಿ ಗಿಡದಿಂದ ಹಣ್ಣಾದ ತರಕಾರಿ ಬೇರ್ಪಡಿಸಿ ನಾಶ ಗೊಳಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ರೈತ ಸ್ವಪ್ನಿಲ್ ಪಾಟೀಲ್, ಕೊರೊನ ವೈರಸ್ ಮನುಷ್ಯರಿಗೆ ಅಷ್ಟೇ ಬಂದಿಲ್ಲ ರೈತರ ಬೆಳೆಗಳಿಗೆ ಬಂದಿದೆ. ಇದೇ ಮೊದಲು ತೋಟಗಾರಿಕೆ ಬೆಳೆ ಬೆಳೆದು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದು, ತುಂಬಾ ನಿರೀಕ್ಷೆಯಲ್ಲಿದ್ದೆ. ಆದರೆ, ಕೊರೊನಾ ವೈರಸ್ ಪರಿಣಾಮವಾಗಿ ಬೆಳೆದ ಫಸಲು ಬೇಡಿಕೆ ಇಲ್ಲದೆ, ಹೊಲದಲ್ಲಿ ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ರೈತರ ಬದುಕು ಅಕ್ಷರಶಃ ನಲುಗಿ ಹೋಗಿದೆ, ಎಂದು ಅಸಹಾಯಕತೆ ವ್ಯಕ್ತಪಡಿಸಿದರು.