ಬೆಳಗಾವಿ: ಪ್ರಯಾಣಿಕರಿಂದ ಭರ್ತಿ ಆಗಿದ್ದ ಬಸ್ನ್ನು ಧುಮ್ಮುಕ್ಕಿ ಹರಿಯುತ್ತಿರುವ ಸೇತುವೆ ಮೇಲೆ ಚಾಲಕ ದಾಟಿಸಿರುವ ಘಟನೆ ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಮಹಾಡ್ ತಾಲೂಕಿನಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಅಲ್ಲಿನ ಬಹುತೇಕ ಸೇತುವೆಗಳು ಮುಳುಗಡೆಗೊಂಡಿವೆ. ಧುಮ್ಮುಕ್ಕಿ ಹರಿಯುತ್ತಿರುವ ಸೇತುವೆ ಮೇಲೆ ಪ್ರಯಾಣಿಕರು ತುಂಬಿದ್ದ ಬಸ್ ದಾಟಿಸುವ ಮೂಲಕ ಮಹಾರಾಷ್ಟ್ರ ಬಸ್ ಚಾಲಕ ಜನರ ಪ್ರಾಣದ ಜೊತೆಗೆ ಚೆಲ್ಲಾಟ ಆಡಿದ್ದಾನೆ. ಸೇತುವೆ ಮೇಲೆ ಬಸ್ ದಾಟುವ ವಿಡಿಯೋವನ್ನು ಸ್ಥಳೀಯರು ಮೊಬೈಲಿನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಯಗಢ ಜಿಲ್ಲೆಯ ಮಹಾಡ ತಾಲೂಕಿನ ನದಿಯೊಂದು ವೇಗವಾಗಿ ಹರಿಯುತ್ತಿದ್ದು, ಸೇತುವೆ ಮುಳುಗಡೆಗೊಂಡಿದೆ. ಇಂತಹ ಪರಿಸ್ಥಿಯಲ್ಲಿ ಯಾವುದೇ ಭಯ ಇಲ್ಲದೇ ಚಾಲಕ ಬಸ್ ದಾಟಿಸಿದ್ದು, ಚಾಲಕನ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಇನ್ನು ಕೊಲ್ಲಾಪುರದಲ್ಲಿ ನೋಡ ನೋಡುತ್ತಿದ್ದಂತೆ ಕಟ್ಟಡ ಕುಸಿದು ಬಿದ್ದಿದ್ದು, ಇಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಗರದ ಮಹಾದ್ವಾರ ರಸ್ತೆ ಪ್ರದೇಶದಲ್ಲಿ ಅಪಾಯಕಾರಿ ಕಟ್ಟಡದ ಒಂದು ಭಾಗ ಮುರಿದು ಬಿದ್ದಿದೆ. ಇದರ ವಿಡಿಯೋವನ್ನು ಸ್ಥಳೀಯರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.