ಬೆಳಗಾವಿ: ಕುಂದಾನಗರಿಯಲ್ಲಿ ಬೆಳ್ಳಂಬೆಳಗ್ಗೆ ನೆತ್ತರು ಹರಿಯಿತು. ನಗರದ ಹೊರವಲಯ ವಡಗಾವಿಯಲ್ಲಿ ನಡುರಸ್ತೆಯಲ್ಲೇ ಕಟ್ಟಡ ಕಾರ್ಮಿಕನನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ.
![Building worker murder](https://etvbharatimages.akamaized.net/etvbharat/prod-images/12646363_th.jpg)
ಬೆಳಗಾವಿ ತಾಲೂಕಿನ ಅಂಬೆವಾಡಿ ಗ್ರಾಮದ ಮಹಾದೇವ ಮಾರುತಿ ಜಾಧವ್ (50) ಕೊಲೆಯಾದ ಕಾರ್ಮಿಕ. ಗೌಂಡಿ ಕೆಲಸ ಮಾಡುತ್ತಿದ್ದ ಮಹಾದೇವ, ಕೆಲಸದ ನಿಮಿತ್ತ ವಡಗಾವಿಯ ಭಾರತ ನಗರದ ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಮಹಾದೇವ ಅವರ ಕುಟುಂಬ ಅಂಬೆವಾಡಿ ಗ್ರಾಮದಲ್ಲಿ ನೆಲೆಸಿದ್ದು, ಇವರು ವಾಸವಿದ್ದ ಬಾಡಿಗೆ ಮನೆ ಪಕ್ಕವೇ ಸಹೋದರಿಯ ಮನೆಯೂ ಇದೆ.
ಇದನ್ನೂ ಓದಿ: ಮೈಸೂರು: ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ 'ಆರಕ್ಷಕ' ಅರೆಸ್ಟ್
ಇಂದು ಬೆಳಗ್ಗೆ ಸಹೋದರಿಯೊಂದಿಗೆ ಮಾತನಾಡಿದ್ದ ಮಹಾದೇವ, ಸಣ್ಣ ಕೆಲಸ ಇದೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದರು. ಈ ವೇಳೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಇಬ್ಬರು ಅಪರಿಚಿತರು, ನಡುರಸ್ತೆಯಲ್ಲೇ ಮಹಾದೇವನನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.
ಕೊಲೆಯ ಹಿಂದಿನ ಕಾರಣ ತಿಳಿದು ಬಂದಿಲ್ಲ. ಶಹಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.
ಈ ಸಂಬಂಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕರ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.