ಅಥಣಿ: ಕೃಷಿ ಹೊಂಡದಲ್ಲಿ ಈಜಲು ಹೋಗಿ ಅಣ್ಣ-ತಂಗಿ ಇಬ್ಬರೂ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗುಂಡೇವಾಡಿ ಗ್ರಾಮದಲ್ಲಿ ನಡೆದಿದೆ.
15 ವರ್ಷದ ಪಾರಿಶನಾಥ ನ್ಯಾಮಣ್ಣ ಕುಪವಾಡ, 13 ವರ್ಷದ ಸನ್ಮತಿ ನ್ಯಾಮಣ್ಣ ಕುಪವಾಡ ಮೃತ ದುರ್ದೈವಿಗಳು. ಎಂದಿನಂತೆ ತಮ್ಮದೇ ಹೊಲದಲ್ಲಿನ ಕೃಷಿ ಹೊಂಡದಲ್ಲಿ ಈಜಾಡುತ್ತಿದ್ದಾಗ ಈಜು ಕಲಿಯಲು ಸನ್ಮತಿ ಬೆನ್ನಿಗೆ ಕಟ್ಟಿಕೊಂಡಿದ್ದ ಕ್ಯಾನ್ ಬಿಚ್ಚಿ ಆಕೆ ಮುಳುಗಿದ್ದಾಳೆ. ತಂಗಿ ಮುಳುಗುತ್ತಿದ್ದುದ್ದನ್ನು ಪಾರಿಶನಾಥ ಗಮನಿಸಿ ರಕ್ಷಣೆಗೆ ಧಾವಿಸಿದಾಗ ಭಯದಿಂದ ಅಣ್ಣನನ್ನು ತಬ್ಬಿಕೊಂಡಿದ್ದಾಳೆ. ಆಗ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಅಣ್ಣ-ತಂಗಿ ಸಾವಿನಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಅಥಣಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.